ರಾಜ್ಯದಲ್ಲಿ ಹಳ್ಳ ಹಿಡಿದ ಫಸಲ್ ವಿಮೆ ಯೋಜನೆ:ರೈತರಿಗೆ ಸಿಗುತ್ತಿಲ್ಲ ಪರಿಹಾರ
ಬೆಂಗಳೂರು : ಕಷ್ಟ ಕಾಲದಲ್ಲಿ ರೈತರ ನೆರವಿಗೆ ಬರಬೇಕಿದ್ದ ಬೆಳೆ ವಿಮೆ ಯೋಜನೆಯು ರಾಜ್ಯದಲ್ಲಿ ಅನ್ನದಾತರ ವಿಶ್ವಾಸವನ್ನು ಕಳೆದುಕೊಂಡು ವರ್ಷಗಳೆ ಕಳೆದಿವೆ. ಈಗ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳು ಕೂಡ ವಿಮೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿ, ನೆರೆ ಹಾವಳಿಯಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, 2019-20ನೇ ಸಾಲಿನಿಂದ ಈವರೆಗೆ ಒಟ್ಟು 53.94 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದೆ. ಇಂತಹ ಸಂಕಷ್ಟ ಕಾಲದಲ್ಲಿ ಬೆಳೆ ವಿಮೆ ಆಸರೆಯಾಗಬೇಕಿತ್ತು. ಆದರೆ, ರೈತರು ತಮ್ಮ ಬೆವರು ಸುರಿಸಿ ಕಟ್ಟಿದ ಪ್ರೀಮಿಯಂ ಕೂಡ ಕೈಗೆ ಸಿಗುತ್ತಿಲ್ಲ!
ಬ್ಯಾಂಕ್, ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೇ ರೈತರಿಗೆ ಸಾಲದ ಮೊತ್ತ ನೀಡಲಾಗುತ್ತದೆ. ಕಡ್ಡಾಯ ವ್ಯವಸ್ಥೆಯಂತಾಗಿರುವ ಈ ವಿಮೆ ಕಂತು ಬಹುತೇಕ ವಿಮಾ ಕಂಪೆನಿಗಳ ಪಾಲು ಎಂಬಂತಾಗಿದೆ. ಬೆಳೆ ಸಾಲ ಪಡೆಯುವ ರೈತರ ಹೊರತಾಗಿ, ಉಳಿದ ಬಹುತೇಕ ರೈತರು ವಿಮೆ ಯೋಜನೆ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.