ಪ್ರಯಾಣಿಕರಂತೆ ಮಫ್ತಿಯಲ್ಲಿ ಆಟೋ ಏರಿದ ಪೊಲೀಸರು : 300ಕ್ಕೂ ಹೆಚ್ಚು ಆಟೋಗಳ ಜಪ್ತಿ
ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಪ್ರಯಾಣಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು, ಆಟೋ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು 312 ಆಟೋಗಳನ್ನು ಜಪ್ತಿ ಮಾಡಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ನಗರದೆಲ್ಲೆಡೆ ಸಾರ್ವಜನಿಕರ ಶಾಪಿಂಗ್ ಜೋರಾಗಿದ್ದು. ಹಬ್ಬದ ಆಚರಣೆಗಾಗಿ ಬೇರೆ - ಬೇರೆ ಊರುಗಳಿಗೆ ಹೋಗುವ ಜನರ ಸಂಖ್ಯೆ ಹೆಚ್ಚಿದೆ. ಆಟೋ ಚಾಲಕರು ಇದೇ ಪರಿಸ್ಥಿತಿಯ ಲಾಭ ಪಡೆದು ನಿಯಮಬಾಹಿರವಾಗಿ ಹೆಚ್ಚಿನ ದರ ಪಡೆಯುತ್ತಿದ್ದ ಸಂಬಂಧ ಮತ್ತು ಪ್ರಯಾಣಿಕರು ಕರೆದ ಸ್ಥಳಕ್ಕೆ ಬರಲು ನಿರಾಕರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಪೊಲೀಸರಿಗೆ ಸಾಕಷ್ಟು ದೂರು ಸಲ್ಲಿಕೆಯಾಗಿದ್ದವು.
ಈ ದೂರುಗಳ ಆಧರಿಸಿ ನಗರದ 44 ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ ಪೊಲೀಸರು, ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದರು. ಪ್ರಯಾಣಿಕರಂತೆ ಮಫ್ತಿಯಲ್ಲಿ ಆಟೋ ಏರಿದ ಪೊಲೀಸರು, ದುಪ್ಪಟ್ಟು ದರ ವಸೂಲಿ ಮಾಡಿ ಸಾರ್ವಜನಿಕರನ್ನು ಶೋಷಿಸುತ್ತಿದ್ದ 312 ಚಾಲಕರ ಆಟೋಗಳನ್ನು ಜಪ್ತಿ ಮಾಡಿದರು.