ಭಾರತ್‌ ಜೋಡೋ ರಾಜ್ಯದಲ್ಲಿ ಮುಂದುವರಿಕೆ: ಡಿ.ಕೆ. ಶಿವಕುಮಾರ್‌

ಭಾರತ್‌ ಜೋಡೋ ರಾಜ್ಯದಲ್ಲಿ ಮುಂದುವರಿಕೆ: ಡಿ.ಕೆ. ಶಿವಕುಮಾರ್‌

ಬೆಂಗಳೂರು: ಭಾರತ್‌ ಜೋಡೋ ಯಾತ್ರೆಯ ಕರ್ನಾಟಕದ ಸ್ಮರಣೀಯ ಘಟನೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ಕೆಪಿಸಿಸಿ ಮುಂದಾಗಿದೆ.

ಯಾತ್ರೆ ಸಾಗಿದ ಮಾರ್ಗದಲ್ಲಿ ನಡೆದ ಸಂವಾದ, ಜನಸಾಮಾನ್ಯರ ಭೇಟಿ, ಸ್ಪಂದನೆ, ಅಪರೂಪದ ದೃಶ್ಯಾವಳಿ ಒಳಗೊಂಡ ಪ್ರದರ್ಶನ ರಾಜ್ಯವ್ಯಾಪಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.

ಶಿವಕುಮಾರ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಈ ಯಾತ್ರೆಯನ್ನು ಇಲ್ಲಿಗೆ ನಿಲ್ಲಿಸದೆ, ಎಲ್ಲ ಜಿಲ್ಲೆಗಳಲ್ಲಿ ಯಾತ್ರೆಯ ಛಾಯಾಚಿತ್ರ ಪ್ರದರ್ಶನ ಮಾಡಲಾಗುವುದು. ಧ್ರುವನಾರಾಯಣ್‌ ಅವರ ಅಧ್ಯಕ್ಷತೆಯಲ್ಲಿ ಬಿ.ಎಲ್‌. ಶಂಕರ್‌, ವಿ.ಆರ್‌. ಸುದರ್ಶನ್‌, ಪ್ರೊ| ರಾಧಾಕೃಷ್ಣ, ಸಿ.ಎಸ್‌. ದ್ವಾರಕನಾಥ್‌, ಐಶ್ವರ್ಯ ಮಹಾದೇವ್‌, ಗುರುಪಾದಸ್ವಾಮಿ, ಸೆಂಥಿಲ್‌, ಮನ್ಸೂರ್‌ ಅಲಿ ಖಾನ್‌ ಹಾಗೂ ದಿನೇಶ್‌ ಗೂಳಿಗೌಡ ಅವರನ್ನೊಳಗೊಂಡ ಸಮಿತಿ ಮಾಡಲಾಗುವುದು. ಈ ಮೂಲಕ ಭಾರತ್‌ ಜೋಡೋ ಯಾತ್ರೆ ರಾಜ್ಯದಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದರು.

ಚರ್ಚಿಸಿ ಪಕ್ಷದ ಚುನಾವಣ ಪ್ರಣಾಳಿಕೆ
ರಾಹುಲ್‌ ಗಾಂಧಿ ಅವರು ರಾಯಚೂರಿನಲ್ಲಿ ಸಭೆ ಮಾಡಿ ಯಾತ್ರೆ ಕುರಿತು ನಮ್ಮ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಯಾತ್ರೆಯನ್ನು ಮುಂದಿನ ದಿನಗಳಲ್ಲಿ ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಕಾರ್ಯಯೋಜನೆ ರೂಪಿಸುತ್ತೇವೆ. ಈ ಯಾತ್ರೆಯಲ್ಲಿ ಜನ ಹೇಳಿಕೊಂಡಿರುವ ಸಮಸ್ಯೆ ಬಗ್ಗೆ ನಾವು ಚರ್ಚಿಸಿ ಪಕ್ಷದ ಚುನಾವಣ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ ಎಂದು ಹೇಳಿದರು.

ರಾಹುಲ್‌ ಗಾಂಧಿ ಅವರ ನಡಿಗೆ ಜನಸಾಮಾನ್ಯರ ಕಡೆಗೆ ಆಗಿತ್ತು. ದೇಶಾದ್ಯಂತ ಜನಸಾಮಾನ್ಯರ ಬಳಿಗೆ ಹೋಗಿ ಅವರ ನೋವನ್ನು ಖುದ್ದಾಗಿ ಆಲಿಸಿರುವ ಏಕೈಕ ನಾಯಕ ರಾಹುಲ್‌ ಗಾಂಧಿ ಎಂದು ಡಿಕೆಶಿ ಬಣ್ಣಿಸಿದರು.