ಖಾನಾಪುರದಿಂದ ಸುವರ್ಣಸೌಧದವರೆಗೆ ಅಂಜಲಿ ನಿಂಬಾಳ್ಕರ್ ಪಾದಯಾತ್ರೆ

ಬೆಳಗಾವಿ, ಡಿ.13- ಖಾನಾಪುರ ಮತಕ್ಷೇತ್ರದ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಖಾನಾಪುರದಿಂದ ಬೆಳಗಾವಿ ಸುವರ್ಣಸೌಧದವರೆಗೆ 40ಕಿಮೀ ಪಾದಯಾತ್ರೆ ನಡೆಸಿ ಶಾಸಕಿ ಅಂಜಲಿ ನಿಂಬಾಳ್ಕರ್ ಸರ್ಕಾರದ ಗಮನ ಸೆಳೆದರು.
ರಸ್ತೆ ನಿರ್ಮಾಣ, ನೆರೆ ಪರಿಹಾರ, ಕಬ್ಬಿನ ಬಾಕಿ ಬಿಲ್, ಅರಣ್ಯ ಇಲಾಖೆಯಿಂದ ಜನತೆಗೆ ಕಿರುಕುಳ, ಕಾಡಿನ ಹಳ್ಳಿಗಳಿಗೆ ಕರೆಂಟ್ ವ್ಯವಸ್ಥೆ, ಸೇತುವೆ ನಿರ್ಮಾಣ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪಶು ಚಿಕಿತ್ಸಾಲಯ, ಲಘು ಉದ್ಯೋಗ ಕೈಗಾರಿಕೆ ಸ್ಥಾಪನೆ, ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ಖಾನಾಪುರದಿಂದ ಪಾದಯಾತ್ರೆ ಕೈಗೊಂಡಿದ್ದ ಅವರು, ಇಂದು ಬೆಳಗಾವಿ ಸುವರ್ಣ ಸೌಧ ತಲುಪಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಾಡುಪ್ರಾಣಿಗಳಿಂದ ಆದ ಜೀವ ಹಾನಿ ಹಾಗೂ ಆಸ್ತಿಪಾಸ್ತಿಗೆ ಪರಿಹಾರ ಒದಗಿಸುವುದು ಸೇರಿದಂತೆ ಇಡೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನಾ ಪಾದಯಾತ್ರೆ ನಡೆಸಲಾಗಿದೆ. ಅತಿವೃಷ್ಟಿ ಸಂದರ್ಭದಲ್ಲಿ ಬೆಳಹಾನಿ, ಜೀವಹಾನಿಯಾಗಿದ್ದು, ಸರ್ಕಾರ ಕನಿಷ್ಟ ಪರಿಹಾರವನ್ನೂ ನೀಡಿಲ್ಲ.
ಹೀಗಾಗಿ ಸರ್ಕಾರದ ಗಮನ ಸೆಳೆಯಲು ಕ್ಷೇತ್ರದ ಜನರೊಂದಿಗೆ ಸದನದ ಹೊರಗೆ ಹೋರಾಟ ನಡೆಸಿದ್ದೇವೆ. ಬೇಡಿಕೆಗಳ ಈಡೇರಿಕೆಗೆ ಸದನದ ಒಳಗೂ ಕೂಡ ಹೋರಾಟ ನಡೆಸುತ್ತೇವೆ. ನಮ್ಮ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಪಾದಯಾತ್ರೆಯಲ್ಲಿ ಪಾಲ್ಗೊಂಡು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಸದನದಲ್ಲಿ ನಮ್ಮ ದನಿಯಾಗಲಿದ್ದಾರೆ ಎಂದು ಅವರು ಹೇಳಿದರು.
ಪಾದಯಾತ್ರೆಯಲ್ಲಿ ಗಣೇಶ್ ಹುಕ್ಕೇರಿ, ಶಾಸಕ ಯತೀಂದ್ರ ಸಿದ್ದರಾಮಯ್ಯ, ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.