ರಾಜ್ಯದಲ್ಲಿ ಸದ್ಯಕ್ಕಿಲ್ಲ ಬೂಸ್ಟರ್ ಡೋಸ್

ಬೆಂಗಳೂರು,ಡಿ.13-ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಳವಾಗುತ್ತಿದ್ದಂತೆ ಬೂಸ್ಟರ್ ಡೋಸ್‍ಗೆ ಭಾರೀ ಬೇಡಿಕೆ ಕಂಡುಬಂದರೂ ಸದ್ಯಕ್ಕೆ ಬೂಸ್ಟರ್ ಡೋಸ್ ಅವಶ್ಯಕತೆ ಇಲ್ಲ ಎಂದು ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಸ್ಪಷ್ಟಪಡಿಸಿದೆ. ಓಮಿಕ್ರಾನ್ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಬೂಸ್ಟರ್ ಡೋಸ್ ನೀಡಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ತಜ್ಞರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
ಆದರೆ, ರಾಜ್ಯ ಸರ್ಕಾರದ ಈ ಬೇಡಿಕೆಯನ್ನು ತಿರಸ್ಕರಿಸಿರುವ ಐಸಿಎಂಆರ್ ಬೂಸ್ಟರ್ ಡೋಸ್ ನೀಡುವ ಬದಲು ಎಲ್ಲರಿಗೂ ಎರಡನೆ ಡೋಸ್ ಹಾಕಿಸುವತ್ತ ಗಮನ ಹರಿಸುವಂತೆ ಸಲಹೆ ನೀಡಿದೆ. ಹೈರಿಸ್ಕ್ ರಾಷ್ಟ್ರವಾಗಿರುವ ಬ್ರಿಟನ್‍ನಲ್ಲಿ ಈಗಾಗಲೇ 30 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.
ಓಮಿಕ್ರಾನ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಬೂಸ್ಟರ್ ಡೋಸ್ ನೀಡಿದರೆ ಪ್ರತಿಕಾಯ ಶಕ್ತಿ ಶೇ.90 ರಷ್ಟು ವೃದ್ಧಿಯಾಗುವುದರಿಂದ ಬೂಸ್ಟರ್ ಡೋಸ್ ನೀಡಿಕೆಗೆ ಆದ್ಯತೆ ನೀಡುವಂತೆ ತಜ್ಞ ವೈದ್ಯರು ಮನವಿ ಮಾಡಿಕೊಂಡಿದ್ದರು. ತಜ್ಞರ ಸಲಹೆ ಮೇರೆಗೆ ಕೊರೊನಾ ಎರಡನೆ ಲಸಿಕೆ ಪಡೆದು ಆರು ತಿಂಗಳು ಕಳೆದಿರುವವರಿಗೆ ಬೂಸ್ಟರ್ ಡೋಸ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು.ಹೀಗಾಗಿ ಬೂಸ್ಟರ್ ಡೋಸ್ ಲಸಿಕೆಗೆ ಆರ್ಹರಾಗಿರುವ 30 ಲಕ್ಷ ಮಂದಿಯನ್ನು ಗುರುತಿಸಲಾಗಿತ್ತು.
ಇದರ ಜೊತೆಗೆ ಓಮಿಕ್ರಾನ್ ಮಕ್ಕಳ ಮೇಲೂ ಗಾಢ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮಕ್ಕಳಿಗೂ ಲಸಿಕೆ ಹಾಕಿಸಲು ಅನುಮತಿ ಕೇಳಲಾಗಿತ್ತು. ಆದರೆ, ಐಸಿಎಂಆರ್ ಸಂಸ್ಥೆ ಸಧ್ಯಕ್ಕೆ ಬೂಸ್ಟರ್ ಅಗತ್ಯವಿಲ್ಲ. ಎರಡನೆ ಡೋಸ್ ಪೂರ್ಣಗೊಳಿಸಲು ಸೂಚನೆ ನೀಡಿರುವುದರಿಂದ ರಾಜ್ಯದಲ್ಲಿ ಸಧ್ಯಕ್ಕೆ ಬೂಸ್ಟರ್ ಡೋಸ್ ಲಭಿಸುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.