ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆ ಆಗುತ್ತಿದೆ ಅಣ್ಣಾವ್ರ 'ಭಾಗ್ಯವಂತರು'

ಎವರ್ ಗ್ರೀನ್ ಸಿನಿಮಾಗಳ ಮರುಬಿಡುಗಡೆ ಹೊಸತೇನೂ ಅಲ್ಲ. 'ಓಂ' ಸೇರಿದಂತೆ ಹಲವಾರು ಸಿನಿಮಾಗಳು ಮರು ಬಿಡುಗಡೆಗೊಂಡು ಉತ್ತಮ ಪ್ರದರ್ಶನವನ್ನು ಕಂಡಿವೆ.
ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಸಾಕಷ್ಟು ಸಿನಿಮಾಗಳು ಸಹ ಮರು ಬಿಡುಗಡೆಗೊಂಡಿವೆ.
ಡಾ ರಾಜಕುಮಾರ್ ಹಾಗೂ ಬಿ.ಸರೋಜಾದೇವಿ ಅಭಿನಯಸಿದ್ದ ಸೂಪರ್ ಹಿಟ್ "ಭಾಗ್ಯವಂತರು" ಚಿತ್ರವನ್ನು ಭಾರ್ಗವ ನಿರ್ದೇಶಿಸಿದ್ದರು. ದ್ವಾರಕೀಶ್ ಚಿತ್ರ ನಿರ್ಮಾಣ ಮಾಡಿತ್ತು. ಈಗ ನಲವತ್ತೈದು ವರ್ಷಗಳ ನಂತರ ಹೊಸ ತಂತ್ರಜ್ಞಾನದೊಂದಿಗೆ "ಭಾಗ್ಯವಂತರು" ಚಿತ್ರ ಮರು ಬಿಡುಗಡೆಯಾಗುತ್ತಿದೆ. ಮುನಿರಾಜು.ಎಂ ಈ ಚಿತ್ರವನ್ನು ಈಗ ಬಿಡುಗಡೆ ಮಾಡುತ್ತಿದ್ದಾರೆ.
7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಜುಲೈ 8ರಂದು ರಾಜ್ಯಾದ್ಯಂತ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ "ಭಾಗ್ಯವಂತರು" ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಮುನಿರಾಜು ತಿಳಿಸಿದ್ದಾರೆ.
ಡಾ ರಾಜಕುಮಾರ್ ಅವರ ಅಪಟ್ಟ ಅಭಿಮಾನಿಯಾಗಿರುವ ಮುನಿರಾಜು, ಈ ಹಿಂದೆ "ಆಪರೇಷನ್ ಡೈಮೆಂಡ್ ರಾಕೇಟ್", " ನಾನೊಬ್ಬ ಕಳ್ಳ", "ದಾರಿ ತಪ್ಪಿದ ಮಗ" ಸೇರಿದಂತೆ ಅಣ್ಣಾವ್ರ ಅಭಿನಯದ ಇನ್ನೂ ಕೆಲವು ಸಿನಿಮಾಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದಾರೆ. ಈಗ "ಭಾಗ್ಯವಂತರು" ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.
ಇದರ ನಂತರ ಮುಂದೆ "ಹುಲಿ ಹಾಲಿನ ಮೇವು" ಸೇರಿದಂತೆ ಅಣ್ಣಾವ್ರ ಇನ್ನಷ್ಟು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
'ಭಾಗ್ಯವಂತರು' ಸಿನಿಮಾ ಮೊದಲಿಗೆ 1977 ರಂದು ಬಿಡುಗಡೆ ಆಗಿತ್ತು. ಸಿನಿಮಾ ಬಹುದೊಡ್ಡ ಹಿಟ್ ಎನಿಸಿಕೊಂಡಿತ್ತು. ಸಿನಿಮಾದ ಹಾಡುಗಳು ಇಂದಿಗೂ ಎವರ್ ಗ್ರೀನ್.