ನಟ ಸಂಚಾರಿ ವಿಜಯ್' ಇನ್ನಿಲ್ಲ

ನಟ ಸಂಚಾರಿ ವಿಜಯ್' ಇನ್ನಿಲ್ಲ

ಬೆಂಗಳೂರು : ಬೈಕ್ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನಟ ಸಂಚಾರಿ ವಿಜಯ್, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಇನ್ನಿಲ್ಲವಾಗಿದ್ದಾರೆ.

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ನಟ ಕಿಚ್ಚ ಸುದೀಪ್, ನಟ ಸಂಚಾರಿ ವಿಜಯ್ ಇನ್ನಿಲ್ಲ ಎಂಬುದನ್ನು ನೆನಪಿಸಿಕೊಳ್ಳಲು ಕೂಡ ಆಗುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಬಾರಿ ನಾನು ಅವರು ಭೇಟಿಯಾಗಿದ್ದೆವು. ಅಲ್ಲದೇ ಅವರ ಮುಂದಿನ ಚಿತ್ರದ ಬಗ್ಗೆಯೂ ಕುತೂಹಲ ಮೂಡಿತ್ತು. ಮುಂದಿನ ಚಿತ್ರ ಬಿಡುಗಡೆ ಮುನ್ನವೇ ಅವರು ಇನ್ನಿಲ್ಲವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಕೋರಿದ್ದಾರೆ.

ಅಂದಹಾಗೇ, ಶನಿವಾರ ರಾತ್ರಿ ಗೆಳೆಯ ನವೀನ್ ಜೊತೆಗೆ ಬೈಕ್ ನಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ನಟ ಸಂಚಾರಿ ವಿಜಯ್ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಅಪಘಾತಗೊಂಡಿದ್ದರು. ತಲೆಯ ಎಡಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದು, ರಕ್ತಸ್ರಾವ ಕೂಡ ಆಗಿತ್ತು. ಕೂಡಲೇ ಅವರನ್ನು ನಟ ಸುದೀಪ್ ಮನವಿ ಮೇರೆಗೆ ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮೂಲಕ ರಕ್ತಸ್ರಾವವನ್ನು ಸರಿ ಮಾಡಲಾಗಿತ್ತು.

ಐಸಿಯುನಲ್ಲಿ ಇಂದು ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ, ಬ್ರೈನ್ ಸ್ಟ್ರೋಕ್ ಉಂಟಾಗಿ, ಅವರು ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಿದ್ದರು. ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬುದಾಗಿಯೂ ಅಪೋಲೋ ಆಸ್ಪತ್ರೆಯ ವೈದ್ಯ ಡಾ.ಅರುಣ್ ನಾಯ್ಕ್ ಮಾಹಿತಿ ನೀಡಿದ್ದರು. ಅಲ್ಲದೇ ಈ ಬಗ್ಗೆ ಅವರ ಕುಟುಂಬಸ್ಥರಿಗೂ ತಿಳಿಸಿದ್ದಾಗಿ ಹೇಳಿದ್ದರು.

ನಟ ಸಂಚಾರಿ ವಿಜಯ್ ಚಿಕಿತ್ಸೆಗೆ ಸ್ಪಂದಿಸದ ಕಾರಣ, ಗಂಭೀರ ಸ್ಥಿತಿಯನ್ನು ತಲುಪಿದ್ದ ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಟ ನೀನಾಸಂ ಸತೀಶ್ ನನೆದು ಕಣ್ಣೀರಿಟ್ಟರು. ಅಲ್ಲದೇ ಅವರ ಕುಟುಂಬಸ್ಥರು ನಟ ಸಂಚಾರಿ ವಿಜಯ್ ಅಂಗಾಗ ದಾನ ಮಾಡುವಂತ ನಿರ್ಧಾರವನ್ನು ಕೈಗೊಂಡಿರೋದಾಗಿ ಪ್ರಕಟಿಸಿದ್ದರು.

ಇದರ ಮಧ್ಯೆ ಸಂಚಾರಿ ವಿಜಯ್ ಅವರ ಮೆದುಳು ಕೆಲಸ ಮಾಡೋದನ್ನು ನಿಲ್ಲಿಸಿದೆ ಎಂಬುದಾಗಿ ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸುವ ಮೂಲಕ, ಸಂಚಾರಿ ವಿಜಯ್ ಅವರ ಆರೋಗ್ಯ ಸ್ಥಿತಿ ತೀರ ಗಂಭೀರವಾಗಿದೆ ಎಂಬುದಾಗಿ ತಿಳಿಸಿದ್ದರು.

ಈ ಎಲ್ಲಾ ಮಾಹಿತಿಯ ನಂತ್ರ, ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನಟ ಸಂಚಾರಿ ವಿಜಯ್ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಮೂಲಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಟಾರಿ ವಿಜಯ್ ಇನ್ನಿಲ್ಲವಾಗಿದ್ದಾರೆ.

ನಟ ಸಂಚಾರಿ ವಿಜಯ್ ಬದುಕಿನ ಹಿನ್ನೋಟ

ಸಂಚಾರಿ ವಿಜಯ್ ಹೆಸರಿನಿಂದ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ ಒಬ್ಬ ಚಲನಚಿತ್ರ ಮತ್ತು ನಾಟಕ ನಟ. ಸಂಚಾರಿ ಹೆಸರಿನ ನಾಟಕ ತಂಡದಲ್ಲಿ ಇವರು ಒಬ್ಬರಾಗಿರುವುದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಆರಂಭಿಕ ಜೀವನ ಮತ್ತು ಶಿಕ್ಷಣ

ಇವರು ಹುಟ್ಟಿದ್ದು ಜುಲೈ 17, 1983ರಲ್ಲಿ ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ, ಸಿಂಗಟಗೆರೆ ಹೋಬಳಿಯ, ರಂಗಾಪುರ ಗ್ರಾಮದಲ್ಲಿ. ಇವರದ್ದು ಕಲೆಯ ಹಿನ್ನೆಲೆಯ ಕುಟುಂಬವಾಗಿದ್ದು, ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ರೇಡಿಯೋದಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು. ಇಂತಹ ಕುಟುಂಬದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರತಿಷ್ಠಿತ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದರು.

ನಟನಾ ವೃತ್ತಿ

ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು, ತಮ್ಮ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ಥಿಯೇಟರ್‍ನ ರಂಗತಂಡದ ಹಲಾವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ, ಎರಡು ನಾಟಕಗಳನ್ನು ನಿರ್ದೇಶಿಸಿದ್ದರು.

ಸಂಗೀತ ಕ್ಷೇತ್ರ

ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿರುವ ಇವರು, ಹಲವಾರು ನಾಟಕಗಳಲ್ಲಿ ಹಾಡಿದ್ದು, ರಿಯಾಲಿಟಿ ಶೋಗಳಲ್ಲಿಯೂ ಸಹ ಭಾಗವಹಿಸಿದ್ದರು.

ನಟನಾಗಿ

ಒಬ್ಬ ಭಾರತೀಯ ರಂಗಭೂಮಿ ಮತ್ತು ಸಿನೆಮಾ ಕಲಾವಿದರಾಗಿದ್ದು ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನೆಮಾದಲ್ಲಿಯೂ ಕೆಲಸ ಮಾಡಿದ್ದರು.

೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಇವರಿಗೆ ಕನ್ನಡದ ನಾನು ಅವನಲ್ಲ…ಅವಳು ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದ್ದು, ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ. ಇದೇ ಪಟ್ಟಿಯಲ್ಲಿ, ಮುಖ್ಯ ಪಾತ್ರ ನಿರ್ವಹಿಸಿದ್ದ ಮತ್ತೊಂದು ಸಿನೆಮಾ ಹರಿವು, ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.

ರಂಗಭೂಮಿ ನಟನೆ

  1. ಸಾವು ಧ್ಯೇಯಕ್ಕಿಲ್ಲ
  2. ಸಾಂಬಶಿವ ಪ್ರಹಸನ
  3. ಸ್ಮಶಾನ ಕುರುಕ್ಷೇತ್ರ
  4. ಸಾವಿರದವಳು
  5. ಪ್ಲಾಸ್ಟಿಕ್ ಭೂತ
  6. ಶೂದ್ರ ತಪಸ್ವಿ
  7. ಸತ್ಯಾಗ್ರಹ
  8. ಸಂತೆಯೊಳಗೊಂದು ಮನೆಯ ಮಾಡಿ
  9. ಮಾರ್ಗೊಸ ಮಹಲ್
  10. ಮಹಾಕಾಲ
  11. ಅರಹಂತ
  12. ಕಮಲಮಣಿ ಕಾಮಿಡಿ ಕಲ್ಯಾಣ
  13. ನರಿಗಳಿಗೇಕೆ ಕೋಡಿಲ್ಲ
  14. ವ್ಯಾನಿಟಿ ಬ್ಯಾಗ್
  15. ಪಿನಾಕಿಯೋ
  16. ಹೀಗೆರೆಡು ಕಥೆಗಳು
  17. ಹಳ್ಳಿಯೂರ ಹಮ್ಮೀರ
  18. ಶ್ರೀದೇವಿ ಮಹಾತ್ಮೆ

ನಿರ್ದೇಶನ

  1. ಪಿನಾಕಿಯೋ
  2. ಮಿಸ್ ಅಂಡರ್‌ಸ್ಟ್ಯಾಂಡಿಂಗ್

ಕಿರುತೆರೆ

  1. ನಗುನಗುತಾ ನಲಿ
  2. ಹೊಸ ಬಾಳಿಗೆ ನೀ ಜೊತೆಯಾದೆ
  3. ಪಂಚರಂಗಿ ಪೋಂ..ಪೋಂ
  4. ಪಾಂಡುರಂಗ ವಿಠಲ
  5. ಪಾರ್ವತಿ ಪರಮೇಶ್ವರ
  6. ಅನಾವರಣ

ಕಿರುಚಿತ್ರ

  1. ರೌರವ
  2. ಟಿಕೆಟ್
  3. ಮರ್ಡರ್
  4. ಕವಲೊಡೆದ ದಾರಿ
  5. ಅಹಂ ಬ್ರಹ್ಮಾಸ್ಮಿ
  6. ಅಜ್ಜಿ ಕಥೆ

ಹಿರಿತೆರೆ ಪೋಷಕ ಪಾತ್ರ

  1. ರಂಗಪ್ಪ ಹೋಗ್ಬಿಟ್ನಾ
  2. ರಾಮರಾಮ ರಘುರಾಮ
  3. ವಿಲನ್
  4. ದಾಸ್ವಾಳ
  5. ಒಗ್ಗರಣೆ
  6. ಹೋಂ ಸ್ಟೇ
  7. ಸಿನೆಮಾ ಮೈ ಡಾರ್ಲಿಂಗ್
  8. ಮಾರಿಕೊಂಡವರು
  9. ಸಿಪಾಯಿ
  10. ಶುದ್ಧಿ
  11. ಗೋದಿ ಬಣ್ಣ ಸಾಧಾರಣ ಮೈಕಟ್ಟು
  12. ಭಲೇ ಜೋಡಿ
  13. ಕಿಲ್ಲಿಂಗ್ ವೀರಪ್ಪನ್
  14. ಅಲ್ಲಮ
  15. ವೈಟ್ ಹಾರ್ಸ್

ಸಿನೆಮಾ ಬದುಕು

  1. ರಂಗಪ್ಪ ಹೋಗ್ಬಿಟ್ನ - 2011
  2. ದಾಸವಾಳ - 2013
  3. ಹರಿವು - 2014
  4. ಒಗ್ಗರಣೆ - 2014
  5. ವುನ್ ಸಮಯಲ್ ಅರಯಿಲ್ - ತಮಿಳು, 2014
  6. ಉಲವಚಾರು ಬಿರಿಯಾನಿ, ತಮಿಳು, 2014
  7. ನಾನು ಅವನಲ್ಲ, ಅವಳು - ಅತ್ಯುತ್ತಮ ನಟನೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ - 2015
  8. ವರ್ತಮಾನ
  9. ರಿಕ್ತ
  10. ಆರ್ಯ ಮೌರ್ಯ

ಹೀಗೆ ನಾಟಕ, ರಂಗಭೂಮಿ, ಕಿರುತೆರೆ, ಹಿರಿತೆರೆಯಲ್ಲಿ ತನ್ನದೇ ಆದಂತ ವಿಶಿಷ್ಠ ಅಭಿನಯದ ಮೂಲಕ, ಗುರ್ತಿಸಿಕೊಂಡು, ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಂತ ನಟ ಸಂಚಾರಿ ವಿಜಯ್, ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಅವರು ಚಿಕಿತ್ಸೆಗೆ ಸ್ಪಂದಿಸದೇ, ಇಂದು ನಿಧರಾಗಿದ್ದಾರೆ. ಈ ಮೂಲಕ ನಟ ಸಂಚಾರಿ ವಿಜಯ್ ಇನ್ನಿಲ್ಲವಾಗಿದ್ದಾರೆ.