ಯಡಿಯೂರಪ್ಪ ಮನೆಯಲ್ಲಿ ಚಾಣಕ್ಯ; ಇಂದು ಅಮಿತ್ ಷಾ ಕಾರ್ಯಕ್ರಮ ಹೀಗಿದೆ

ಯಡಿಯೂರಪ್ಪ ಮನೆಯಲ್ಲಿ ಚಾಣಕ್ಯ; ಇಂದು ಅಮಿತ್ ಷಾ ಕಾರ್ಯಕ್ರಮ ಹೀಗಿದೆ

ಬೆಂಗಳೂರು: ‌ಯಡಿಯೂರಪ್ಪ ನಿವಾಸವಾದ ಬೆಳಗ್ಗೆ 9.30 ಕ್ಕೆ ಕಾವೇರಿ ನಿವಾಸಕ್ಕೆ ಗೃಹ ಸಚಿವ ಅಮಿತ್ ಷಾ ಭೇಟಿ ನೀಡಿದರು. ಈ ಸಂದರ್ಭ ಅಲ್ಲೇ ಉಪಹಾರ ಸವಿದ ಅಮಿತ್ ಷಾ ಜತೆಗೆ ಯಡಿಯೂರಪ್ಪ ರಾಜ್ಯ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದು ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಣತಂತ್ರದ ಚರ್ಚೆ ಮಾಡಿದರು. ಉಪಹಾರಕ್ಕೆ ಉಪ್ಪಿಟ್ಟು, ಪೊಂಗಲ್, ದೋಸೆ, ಇಡ್ಲಿ, ರಸ್ ಮಲಾಯ್, ಮುಂತಾದ ಖಾದ್ಯಗಳನ್ನು ಸಿದ್ಧ ಪಡಿಸಲಾಗಿತ್ತು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮತ್ತು ನಳಿನ್ ಕುಮಾರ್ ಕಟೀಲ್ ಹಾಜರಿದ್ದರು. ಅವರೊಂದಿಗೆ ಅಮಿತ್ ಷಾ ಭೇಟಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಬಂದಿದ್ದರು.

ಯಡಿಯೂರಪ್ಪ ಮನೆಯಲ್ಲಿ ಉಪಹಾರ ಸೇವಿಸಿದ ಬಳಿಕ ಬೆಳಗ್ಗೆ 10ಕ್ಕೆ ಖಾಸಗಿ ಹೊಟೇಲಿನಲ್ಲಿ ನಡೆಯುವ ಸಮ್ಮೇಳನದಲ್ಲಿ ಅಮಿತ್ ಷಾ ಭಾಗಿಯಾಗಿದ್ದಾರೆ. ಅದಾದ ಮೇಲೆ ಮಾದಕ ದ್ರವ್ಯಗಳ ಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಇದೇ ಸಂದರ್ಭ ಸಾವಿರಾರು ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ನಾಶ ಕಾರ್ಯಕ್ಕೂ ಸಾಕ್ಷಿಯಾಗಲಿದ್ದಾರೆ.

ಮಧ್ಯಾಹ್ನ 2ಕ್ಕೆ ಕೊಮ್ಮಘಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅಮಿತ್ ಷಾ ಅಲ್ಲಿ ಸಹಕಾರ ಸಮೃದ್ಧಿ ಸೌಧದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಫಲಾನುಭವಿಗಳ ಸಮಾವೇಶ ಆಯೋಜನೆ ಮಾಡಲಾಗಿದ್ದು ಅದರಲ್ಲೂ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಇಷ್ಟೆಲ್ಲಾ ಕಾರ್ಯಕ್ರಮ ಮುಗಿಸಿದ ನಂತರ ಗೃಹ ಸಚಿವರು ಇಂದು ಸಂಜೆ 3.30ಕ್ಕೆ ದೆಹಲಿಗೆ ವಾಪಸ್ ಆಗಲಿದ್ದಾರೆ.