ಮೀಸಲು ಯಥಾಸ್ಥಿತಿ ಆದೇಶ ತೆರವು: ಪಂಚಮಸಾಲಿ ಬೇಡಿಕೆ ಪ್ರಶ್ನಿಸಿದ್ದ ಪಿಐಎಲ್
ಬೆಂಗಳೂರು: 'ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬಾರದು ಮತ್ತು ಮೀಸಲು ಪ್ರವರ್ಗ ಮಾರ್ಪಾಡು ಮಾಡುವಂತೆ ಕೋರಿಯಾವುದೇ ಜಾತಿ, ಉಪಜಾತಿ, ಸಮುದಾಯ ಬುಡಕಟ್ಟುಗಳು ಸಲ್ಲಿಸುವ ಬೇಡಿಕೆಗಳನ್ನು ಸರ್ಕಾರ ಪ್ರೋತ್ಸಾಹಿಸದಂತೆ ತಡೆ ನೀಡಬೇಕು' ಎಂಬ ಮಧ್ಯಂತರ ಮನವಿಗೆ ನೀಡಲಾಗಿದ್ದ ತಡೆ ಮತ್ತು ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು ಎಂಬ ಆದೇಶವನ್ನು ಹೈಕೋರ್ಟ್ ತೆರವು ಮಾಡಿದೆ.
ಈ ಸಂಬಂಧ ಬೆಂಗಳೂರಿನ ಜ್ಞಾನಭಾರತಿಯ ಮೃತ್ಯುಂಜಯ ನಗರದ ನಿವಾಸಿ ಡಿ.ಜಿ. ರಾಘವೇಂದ್ರ ಬಿನ್ ಸೂರ್ಯ ದೇವಾಡಿಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯ ಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ವಿಶೇಷವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 2023ರ ಜನವರಿ 12ರಂದು ನೀಡಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿತು.
'ಸರ್ಕಾರವು, 2-ಎ ಮೀಸಲಾತಿಗೆ ತೊಂದರೆಯಾಗುವಂತಹ ಯಾವುದೇ ಕಾರ್ಯಕ್ಕೆ ಮುಂದಾಗುವುದಿಲ್ಲ. ಪ್ರವರ್ಗ 2-ಎಗೆ ಲಭ್ಯವಿರುವ ಮೀಸಲಾತಿಗೆ ಅಡ್ಡಿ ಉಂಟುಮಾಡುವ ಉದ್ದೇಶವನ್ನು ಸರ್ಕಾರ ಹೊಂದಿಲ್ಲ. ಆದಾಗ್ಯೂ, ಈ ಪ್ರಕರಣದಲ್ಲಿ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರದಿಂದಪ್ರವರ್ಗ 2-ಎ ಅಡಿಯಲ್ಲಿನ ಮೀಸಲಾತಿಯ ಪ್ರಮಾಣದಲ್ಲಿ ಬದಲಾವಣೆ ಮಾಡುವುದಿಲ್ಲ' ಎಂದು ವಾಗ್ದಾನ ನೀಡಿದರು. ನಂತರ, ಈ ಕುರಿತಂತೆ ನ್ಯಾಯಾಲಯಕ್ಕೆ ಲಿಖಿತ ಮುಚ್ಚಳಿಕೆ ಸಲ್ಲಿಸಿದರು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎಚ್.ವಿ.ಮಂಜುನಾಥ್ ಸರ್ಕಾರದ ಮನವಿಗೆ ಬಲವಾದ ಆಕ್ಷೇಪಣೆ ವ್ಯಕ್ತಪಡಿಸಿದರು. ಇದಕ್ಕೆಪ್ರತಿಕ್ರಿಯಿಸಿದ ನ್ಯಾಯಪೀಠ, 'ಮೀಸಲಾತಿಕಲ್ಪಿಸುವ ಸಂಬಂಧ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರವು ಈ ಅರ್ಜಿಯ ಕುರಿತಂತೆ ಅರ್ಜಿ ಮೇಲಿನ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ' ಎಂದು ಸ್ಪಷ್ಟಪಡಿಸಿತು.
ಆಕ್ಷೇಪಣೆ ಏನಿತ್ತು?: ರಾಜ್ಯ ಸರ್ಕಾರ ಈ ಹಿಂದೆ ನ್ಯಾಯಪೀಠಕ್ಕೆ ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ, 'ಕರ್ನಾಟಕ ರಾಜ್ಯ
ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ-1995ರ ಕಲಂ 9ರ ಪ್ರಕಾರ ಯಾವುದಾದರೂ ಒಂದು ಸಮುದಾಯ ತಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರಿಸು ವಂತೆ ಮನವಿ ಸಲ್ಲಿಸಿದರೆ, ಅದನ್ನು ಪರಿಶೀಲಿಸುವುದಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅವಕಾಶವಿದೆ. ಮನವಿ ಮಾಡಿದ ಸಮುದಾಯಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆಯೇ ಎಂಬ ಬಗ್ಗೆ ವಿಚಾರಣೆ, ಸಮೀಕ್ಷೆ, ತನಿಖೆನಡೆಸಿ ವರ್ಗೀಕರಣದ ಬಗ್ಗೆ ಆಯೋಗವುಸರ್ಕಾರಕ್ಕೆ ಶಿಫಾರಸು ಮಾಡಬೇಕಾಗು
ತ್ತದೆ. ಕಲಂ 11ರ ಪ್ರಕಾರ, ಸರ್ಕಾರವು ಆಯೋಗದೊಂದಿಗೆ ಸಮಾಲೋಚನೆ ನಡೆಸಿ, ಪ್ರತಿ 10 ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಅವಕಾಶವಿದೆ. ಇದು ನಿರಂತರ ಪ್ರಕ್ರಿಯೆ' ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು.
ಅರ್ಜಿದಾರರ ಕೋರಿಕೆ: 'ನಾನು ದೇವಾಡಿಗ ಸಮುದಾಯಕ್ಕೆ ಸೇರಿದವ ನಾಗಿದ್ದು ಹಿಂದುಳಿದ ವರ್ಗಗಳಿಗೆ ದೊರೆಯುವ 2-ಎ ಮೀಸಲಾತಿಯ ಫಲಾನುಭವಿಯಾಗಿದ್ದೇನೆ. ಇತ್ತೀಚೆಗೆ ಲಿಂಗಾಯತ-ವೀರಶೈವ ಪಂಚಮಸಾಲಿ ಸಮುದಾಯದವರು ತಮ್ಮನ್ನು ಪ್ರವರ್ಗ 2-ಎಗೆ ಸೇರಿಸಬೇಕು ಎಂಬ ಬೇಡಿಕೆಯನ್ನು ಮಂಡಿಸಿದ್ದಾರೆ. ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿ
ಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಂಚಮಸಾಲಿ ಸಮುದಾಯವನ್ನು 2-ಎಗೆ ಸೇರ್ಪಡೆ ಮಾಡುವುದನ್ನು ಖಚಿತಪಡಿಸಿದ್ದು ಅದಕ್ಕಾಗಿ 2022ರ ಡಿಸೆಂಬರ್ 29ರ ಗಡುವು ನೀಡಿದ್ದರು. ಒಂದು ವೇಳೆ ಈ ಬಲಾಢ್ಯ ಸಮುದಾಯವನ್ನು 2-ಎಗೆ ಸೇರ್ಪಡೆ ಮಾಡಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯ ವಾಗಲಿದೆ. ಹಾಗಾಗಿ, ಅರ್ಜಿ ಇತ್ಯರ್ಥವಾಗುವ ತನಕ ಮೀಸಲು ಪ್ರವರ್ಗಗಳನ್ನು ಮಾರ್ಪಾಡು ಮಾಡುವ ಬೇಡಿಕೆಗಳನ್ನು ಸರ್ಕಾರ ಪ್ರೋತ್ಸಾಹಿಸದಂತೆ
ಮಧ್ಯಂತರ ತಡೆ ನೀಡಬೇಕು' ಎಂದು ಕೋರಿದ್ದರು.
ಸಂಪುಟ ಸಭೆಯಲ್ಲಿ ಒಪ್ಪಿಗೆ ಸಾಧ್ಯತೆ
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 'ಮೀಸಲಾತಿ' ವಿಚಾರವನ್ನು ಅಸ್ತ್ರವಾಗಿ ಬಳಸಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರ, ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಬೇಡಿಕೆ ಮತ್ತು ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ ವಿವಾದಕ್ಕೆ ಅಂತ್ಯ ಹಾಡಲು ನಿರ್ಧರಿಸಿದೆ.
ಮಾರ್ಚ್ 24ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಜಾತಿ ಪಟ್ಟಿಯಲ್ಲಿರುವ 'ಪ್ರವರ್ಗ 3ಎ' ಸಮುದಾಯವನ್ನು (ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳು) 'ಪ್ರವರ್ಗ 2ಸಿ', 'ಪ್ರವರ್ಗ 3ಬಿ' ಸಮುದಾಯವನ್ನು (ಲಿಂಗಾಯತ ವೀರಶೈವ, ಪಂಚಮ ಸಾಲಿ ಹಾಗೂ ಇತರ ಸಮುದಾಯಗಳು) 'ಪ್ರವರ್ಗ 2ಡಿ' ಎಂದು ಸೃಜಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿಯಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
'ಪ್ರವರ್ಗ 3ಎ'ಯಮೀಸಲಾತಿಯನ್ನು ಶೇ 4ರಿಂದ 12ರಷ್ಟು ಹೆಚ್ಚಿಸಬೇಕೆಂದು ಒಕ್ಕಲಿಗ ಸಮುದಾಯ ಬೇಡಿಕೆ ಇಟ್ಟಿದೆ. ತಮಗೆ 2ಎ ಮೀಸಲಾತಿ ನೀಡಬೇಕು ಎಂದು ಲಿಂಗಾಯತ ಸಮುದಾಯ ಪಟ್ಟು ಹಿಡಿದಿದೆ. ಈ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿದೆ. 'ಇದೇ 24ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಬಳಿಕ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವ ಬಗ್ಗೆ ಮಾಹಿತಿ ಸಿಗಲಿದೆ' ಎಂದು ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ ವಿಚಾರದಲ್ಲಿ ಶಿಫಾರಸು ಮಾಡಲು ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಚಿವ ಸಂಪುಟ ಸಮಿತಿ ಈಗಾಗಲೇ ವರದಿ ಸಿದ್ಧಪಡಿಸಿದೆ. ಸದಾಶಿವ ಆಯೋಗದ ವರದಿಯ ಟಿಪ್ಪಣಿಯ ಆಧಾರದಲ್ಲಿ ಚರ್ಚೆ ನಡೆಸಿರುವ ಸಮಿತಿಯು, ಪರಿಶಿಷ್ಟ ಜಾತಿಯ ಶೇ 17 ಮೀಸಲಾತಿಯನ್ನು 4 ಗುಂಪುಗಳಿಗೆ ವರ್ಗೀಕರಿಸುವ ಬಗ್ಗೆ ಶಿಫಾರಸು ಮಾಡಿದೆ. ಈ ಬಗ್ಗೆ ತೀರ್ಮಾನ ಕೈಗೊಂಡು, ಕೇಂದ್ರಕ್ಕೆ ಶಿಫಾರಸು ಮಾಡುವ ವಿಚಾರದಲ್ಲಿ ಸಭೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದೂ ಮೂಲಗಳು ತಿಳಿಸಿವೆ.
'ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಿ'
ಬೆಂಗಳೂರು: 'ಪಂಚಮಸಾಲಿ ಸಮುದಾಯಕ್ಕೆ 2-ಡಿ ಮೀಸಲಾತಿ ನೀಡುವ ವಿಷಯದಲ್ಲಿ ಶುಕ್ರವಾರ ನಡೆಯುವ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು' ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
'ಈ ಸಮುದಾಯಕ್ಕೆ ಮೀಸಲಾತಿ ನೀಡುವ ವಿಷಯದಲ್ಲಿ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ. ಈ ಸಂದರ್ಭದಲ್ಲಿ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಶುಕ್ರವಾರ ಬಹುತೇಕ ಕೊನೆಯ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಮೀಸಲಾತಿ ಶೇಕಡಾವಾರು ಪ್ರಮಾಣದ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು. ಅದನ್ನು ಕೂಡಲೇ ರಾಜ್ಯಪತ್ರದಲ್ಲಿ ಹೊರಡಿಸಬೇಕು' ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ನಾಲ್ಕು ವರ್ಷಗಳಿಂದ ಪಾದಯಾತ್ರೆ, ಹೋರಾಟ, ಉಪವಾಸ ಸತ್ಯಾಗ್ರಹ ನಡೆಸಿದ್ದಕ್ಕೆ ಫಲ ದೊರಕುವ ವಿಶ್ವಾಸ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೇಲಿದ್ದ ವಿಶ್ವಾಸ ದುಪ್ಪಟ್ಟಾಗಿದೆ. ಸಚಿವ ಸಂಪುಟದ ನಿರ್ಣಯಗಳನ್ನು ಆಧರಿಸಿ ಹೋರಾಟ ಸಮಿತಿಯ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗವುದು. ಸರ್ಕಾರದ ನಿರ್ಧಾರಗಳು ಸಮಾಧಾನ ಎನಿಸಿರೆ ಹೋರಾಟವನ್ನು ಶನಿವಾರ ತಾತ್ಕಾಲಿಕವಾಗಿ ಹಿಂಪಡೆಯಲಾಗುವುದು ಎಂದರು.