ತುಮಕೂರು: 'ವರ್ಷದ ತೊಡಕು' ಆಚರಣೆಗೆ ನಿರುತ್ಸಾಹ
ತುಮಕೂರು: ಯುಗಾದಿ ಹಬ್ಬದ 'ವರ್ಷದ ತೊಡಕು' ಆಚರಣೆಗೆ ನಗರದ ಜನರು ಹೆಚ್ಚಿನ ಆಸಕ್ತಿ ತೋರಲಿಲ್ಲ. ಯುಗಾದಿ ಮಾರನೇ ದಿನ ಗುರುವಾರ ಬಂದಿದ್ದು, ಈ ದಿನ ಹೆಚ್ಚಿನ ಜನರು ಮಾಂಸ ತಿನ್ನುವುದಿಲ್ಲ. ಹೀಗಾಗಿ ಖರೀದಿಯೂ ಅಷ್ಟಾಗಿ ನಡೆಯಲಿಲ್ಲ.
ಎಲ್ಲೆಡೆ ಕಳೆದ ವರ್ಷಕ್ಕಿಂತ ಕಡಿಮೆ ವಹಿವಾಟು ನಡೆಯಿತು. ಕೆಲವರು ಶುಕ್ರವಾರ ವರ್ಷದ ತೊಡಕು ಆಚರಿಸಲಿದ್ದಾರೆ. ಇನ್ನೂ ಕೆಲವರು ಭಾನುವಾರಕ್ಕೆ ಮುಂದೂಡಿದ್ದಾರೆ. ಗುರುವಾರ ಸರ್ಕಾರಿ ಕೆಲಸದ ದಿನವಾಗಿದ್ದು, ರಜೆ ಇಲ್ಲದ ಕಾರಣ ಕೆಲವರು ಆಚರಣೆಯಿಂದ ದೂರು ಉಳಿದಿದ್ದರು.
ಕಳೆದ ವರ್ಷ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಮಾಂಸ ಎಂಬ ಗೊಂದಲದ ಮಧ್ಯೆ ಮಾಂಸ ಖರೀದಿ ಜೋರಾಗಿತ್ತು. ಈ ಬಾರಿ ಅಂತಹ ಜನ ಸಂದಣಿ ಕಾಣಿಸಲಿಲ್ಲ. ಎಂದಿನಂತೆ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಕಂಡುಬಂತು. ಕೆಲವರು ಮಾತ್ರ ವರ್ಷದ ತೊಡಕು ಆಚರಿಸಿದರು. ನಗರದಲ್ಲಿ ವಾಹನಗಳ ಓಡಾಟವೂ ಸಾಮಾನ್ಯವಾಗಿತ್ತು.
ನಗರದ ಕೋತಿತೋಪು, ಮಂಡಿಪೇಟೆ, ಗುಬ್ಬಿ ರಸ್ತೆ, ರಿಂಗ್ ರಸ್ತೆ, ಹನುಮಂತಪುರ, ಶಿರಾಗೇಟ್ ಸೇರಿದಂತೆ ವಿವಿಧೆಡೆ ಮಾಂಸದಂಗಡಿಗಳ ಮುಂದೆ ಶಾಮಿಯಾನ ಹಾಕಿ ಮಾಂಸ ಮಾರಾಟ ಮಾಡಲಾಯಿತು. ಗ್ರಾಮಾಂತರ ಭಾಗದ ಗೂಳಹರಿವೆ, ಕೆಸರಮಡು, ಹೊನ್ನುಡಿಕೆ, ಕುಮಂಚಿಪಾಳ್ಯ, ಮಲ್ಲಸಂದ್ರ, ಹೆಗ್ಗೆರೆ ವ್ಯಾಪ್ತಿಯಲ್ಲಿ ಗುಡ್ಡೆ ಮಾಂಸ ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಮಾಂಸ ಖರೀದಿಸಲು ಅಂಗಡಿಗಳಿಗೆ ತೆರಳಿದವರಿಗೆ ಮಾಂಸದ ಬೆಲೆ ಏರಿಕೆಯ ಬಿಸಿ ತಟ್ಟಿತು. ಸಾಮಾನ್ಯ ದಿನಗಳಲ್ಲಿ ಕುರಿ, ಮೇಕೆ ಮಾಂಸಕ್ಕೆ ಕೆ.ಜಿ ₹ 450ರಿಂದ ₹500ಕ್ಕೆ ಮಾರಾಟವಾದರೆ, ಗುರುವಾರ ಕೆ.ಜಿ ₹750ರಿಂದ ₹800ರ ವರೆಗೆ ಮಾರಾಟ ಮಾಡಲಾಯಿತು. ಅದೇ ರೀತಿ ಕೋಳಿ ಮಾಂಸವು ಕೆ.ಜಿ ₹180ರಿಂದ ₹250ರ ವರೆಗೆ ಹೆಚ್ಚಳವಾಗಿತ್ತು.
ವರ್ಷದ ತೊಡಕಿಗೆ ಯುಗಾದಿ ದಿನದಷ್ಟೇ ಮಹತ್ವವಿದೆ. ವರ್ಷ ಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು