ಕಾವೇರಿ ಲಿಂಕ್ ವಿಚಾರಣೆ; ತಮಿಳುನಾಡು ಕಾಲುವೆ ನಿರ್ಮಾಣ ವಿವಾದಕ್ಕೆ ಹೊಸ ತಿರುವು

ಬೆಂಗಳೂರು: ನೆರೆಯ ತಮಿಳುನಾಡು ತರಾತುರಿಯಲ್ಲಿ ನಿರ್ವಿುಸುತ್ತಿರುವ ಕಾವೇರಿ ಸಂಪರ್ಕ ಕಾಲುವೆ (ಕಾವೇರಿ- ವಗೈ- ಗುಂಡಾರ ಲಿಂಕ್ ಕೆನಾಲ್) ವಿವಾದ ಮಹತ್ವದ ತಿರುವು ಪಡೆದಿದ್ದು, ಕರ್ನಾಟಕದ ಮೂಲ ದಾವೆಯನ್ನು ಸುಪ್ರೀಂ ಕೋರ್ಟ್ ನ.15ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ತಮಿಳುನಾಡಿನ ಕರೂರ ಜಿಲ್ಲೆಯಲ್ಲಿ ಕಟ್ಟಲಾಗಿರುವ ಮಾಯನೂರು ಜಲಾಶಯ ದಿಂದ ಕಾವೇರಿಯ ಹೆಚ್ಚುವರಿ ನೀರನ್ನು ಗುಂಡಾರಕ್ಕೆ ಕಾಲುವೆಗಳ ಮೂಲಕ ಹರಿಸಲು ಅಲ್ಲಿನ ಸರ್ಕಾರ ಯೋಜಿಸಿದ್ದು, ಇದಕ್ಕಾಗಿ ಪುದುಕೋಟ್ಟಯಿ ಜಿಲ್ಲೆಯ ಕುಣತ್ತೂರಿವಿನಲ್ಲಿ ಲಿಂಕ್ ಕಾಲುವೆ ನಿರ್ವಿುಸುತ್ತಿದೆ. ಕಾವೇರಿಯ ಹೆಚ್ಚುವರಿ ನೀರು ಬಳಕೆಗೆಂದು ತಮಿಳುನಾಡು 262 ಕಿ.ಮೀ. ಉದ್ದದ ಲಿಂಕ್ ಕಾಲುವೆ ನಿರ್ವಿುಸುತ್ತಿರುವುದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು 2021ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಹೆಚ್ಚುವರಿ ನೀರು ಕಬಳಿಕೆ: ತಮಿಳುನಾಡು ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆ ಪೂರ್ವದಲ್ಲಿ ಅಲ್ಲಿನ ಸರ್ಕಾರ ಈ ಯೋಜನೆಗೆ ಕೈಹಾಕಿದೆ. ತಮಿಳುನಾಡು ಜನರ ಓಲೈಕೆ ಹಾಗೂ ಕಾವೇರಿಯ ಹೆಚ್ಚುವರಿ ನೀರು ಕಬಳಿಸಲು ಹುನ್ನಾರ ಹೂಡಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಯಾವುದೇ ಇಲಾಖೆ ತೀರುವಳಿ ಪಡೆದಿಲ್ಲವೆಂಬ ದೂರು ಬಲವಾಗಿ ಕೇಳಿಬಂದಿದ್ದವು. ಅಲ್ಲದೆ, ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಚುನಾವಣಾ ರಾಜಕೀಯ ಲಾಭ ಮಾಡಿಕೊಳ್ಳಲೆಂದು ಮೌನ ಸಮ್ಮತಿ ನೀಡಿದೆ ಎಂಬ ವಿವಾದ ಸೃಷ್ಟಿಯಾಗಿತ್ತು. ಕಾವೇರಿ ಕಣಿವೆಯಲ್ಲಿ ಕರ್ನಾಟಕದ ಹಿತಾಸಕ್ತಿಗೆ ಮಾರಕವಾದ ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ ಬಿಡುವುದಿಲ್ಲ. ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲವೆಂದು ರಾಜ್ಯದ ಬಿಜೆಪಿ ಸರ್ಕಾರ ಸ್ಪಷ್ಟಪಡಿಸಿ, ಕಾನೂನು ಹೋರಾಟಕ್ಕೆ ಸಿದ್ಧವೆಂದು ಸಾರಿತ್ತು.
ಮೇಕೆದಾಟು ಯೋಜನೆಗೆ ವಿರೋಧ: ಒಂದೆಡೆ ಬಹು ಉದ್ದೇಶಿತ ಮೇಕೆದಾಟು ಯೋಜನೆಯನ್ನು ತಮಿಳುನಾಡು ವಿರೋಧಿಸುತ್ತಿದ್ದು, ಮತ್ತೊಂದೆಡೆ ಕರ್ನಾಟಕಕ್ಕೆ ಸೇರಿದ ಹೆಚ್ಚುವರಿ ನೀರು ಬಳಕೆಗೆ ಯೋಜನೆ ಜಾರಿಗೊಳಿಸಿ ದ್ವಂದ್ವ ನಿಲುವು ಪ್ರದರ್ಶಿಸಿದೆ. ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಸಮುದ್ರಕ್ಕೆ ಸೇರುವ ನೀರು ಶೇಖರಿಸಲು ಮೇಕೆದಾಟು ಬಳಿ ಸಮತೋಲನ ಜಲಾಶಯ ನಿರ್ವಿುಸಲು ರಾಜ್ಯ ಸರ್ಕಾರ ಯೋಚಿಸಿದೆ. ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆ, ವಿದ್ಯುತ್ ಉತ್ಪಾದನೆ ಹಾಗೂ ಉಭಯ ರಾಜ್ಯಗಳ 'ಸಂಕಷ್ಟ ಪರಿಹಾರ' ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.