ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಮೇಲೆ ಭಾರೀ ಬೆಟ್ಟಿಂಗ್ ಶುರು

ಬೆಂಗಳೂರು, ಡಿ.12- ವಿಧಾನ ಪರಿಷತ್ ಚುನಾವಣೆ ಫಲಿತಾಂಶಕ್ಕೆ ಇನ್ನೆರಡು ದಿನ ಬಾಕಿ ಇರುವಂತೆ ಸೋಲು-ಗೆಲುವಿನ ಲೆಕ್ಕಾಚಾರದ ನಡುವೆ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ಭಾರೀ ಬೆಟ್ಟಿಂಗ್ ಶುರುವಾಗಿದೆ.
ಜೆಡಿಎಸ್ ಸ್ಪರ್ಧಿಸಿರುವ ಆರು ಸ್ಥಾನಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಯಾವ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಬಗ್ಗೆ ಹಳ್ಳಿಗಳಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಬೆಳಗಾವಿಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷದ ಅಭ್ಯರ್ಥಿಗಳ ನಡುವೆ ಬೆಟ್ಟಿಂಗ್ ಜೋರಾಗಿದ್ದು, ಲಕ್ಷ ಲಕ್ಷ ಹಣವನ್ನು ಬೆಟ್ಟಿಂಗ್‍ಗೆ ಕಟ್ಟಲಾಗಿದೆ. ಕೋಟ್ಯಂತರ ರೂ. ಹಣವನ್ನು ಅಭ್ಯರ್ಥಿಗಳು ನೀರಿನಂತೆ ವೆಚ್ಚ ಮಾಡಿದ್ದಾರೆ.
ಮತವೊಂದಕ್ಕೆ 50 ಸಾವಿರದಿಂದ 2 ಲಕ್ಷ ರೂ.ವರೆಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂದು ಅದೇ ಹಣದಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ಬಗ್ಗೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಎಂಎಲ್‍ಸಿ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಇಲ್ಲೂ ಕೂಡ ಬರೋಬ್ಬರಿ ಒಂದು ಮತಕ್ಕೆ ಒಂದು ಲಕ್ಷ ಹಣ ನೀಡಿದ್ದು ಬಹಿರಂಗ ಸತ್ಯ.
ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳವರು ಪೈಪೋಟಿಗೆ ಬಿದ್ದವರಂತೆ ಹಣ ನೀಡಿದ್ದಾರೆ. ಇಲ್ಲಿ ಇಬ್ಬರು ಅಭ್ಯರ್ಥಿಗಳ ಸೋಲು-ಗೆಲುವಿನ ಮೇಲೆ ಹಣವನ್ನು ಪಣಕ್ಕಿಟ್ಟು ಬೆಟ್ಟಿಂಗ್ ಕಟ್ಟಲಾಗಿದೆ. ಅತ್ತ ಮಂಡ್ಯ, ಹಾಸನ, ಕೊಡಗು, ಮೈಸೂರು, ತುಮಕೂರಿನಲ್ಲೂ ಕೂಡ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ಬೆಟ್ಟಿಂಗ್ ಕಟ್ಟುತ್ತಿರುವುದು ಕಂಡುಬಂದಿದೆ.
ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ 5 ಸಾವಿರ, 10 ಸಾವಿರ, 20 ಸಾವಿರದವರೆಗೆ ಬೆಟ್ಟಿಂಗ್ ಕಟ್ಟಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲೂ ಕೂಡ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಲೆಕ್ಕಾಚಾರ ಶುರುವಾಗಿದೆ.
ದ್ವಿಸದಸ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ತಲಾ ಒಬ್ಬೊಬ್ಬರನ್ನು ಕಣಕ್ಕಿಳಿಸಿವೆ. ಹಾಗಾಗಿ ಇಲ್ಲಿ ಅಂತಹ ಪೈಪೋಟಿ ಇಲ್ಲ. ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ.
ಮೇಲ್ಮನೆ ಚುನಾವಣೆಯಲ್ಲಿ ಹಣವೇ ಭಾರೀ ಪ್ರಭಾವ ಬೀರಿರುವ ಹಿನ್ನೆಲೆಯಲ್ಲಿ ಯಾರು ಹೆಚ್ಚು ಹಣ ನೀಡಿದ್ದಾರೋ ಅವರಿಗೆ ಮತಗಳು ಹೋಗಿರುವ ಸಾಧ್ಯತೆ ಇದೆ ಎಂದು ಹೇಳಬಹುದಾದರೂ ಕಳೆದ ಬಾರಿ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿತ್ತು.
ಈ ಬಾರಿ ಚುನಾವಣೆಯಲ್ಲಿ ಯಾವ ರೀತಿ ತಿರುವು ತೆಗೆದುಕೊಳ್ಳಲಿದೆ. ಪಕ್ಷನಿಷ್ಠರು ಪಕ್ಷದವರಿಗೆ ಬೆಂಬಲ ನೀಡಿದ್ದಾರೆಯೇ ಅಥವಾ ಹಣಕ್ಕೆ ಮನ್ನಣೆ ನೀಡಿದ್ದಾರೆಯೇ ಎಂಬುದು 14ರ ಫಲಿತಾಂಶದಲ್ಲಿ ಪ್ರಕಟವಾಗಲಿದೆ.