'83' ಸಿನಿಮಾದ ಕನ್ನಡ ಆವೃತ್ತಿಗೆ ಕೇವಲ 6 ಶೋ! ವಿತರಕ ಕೊಟ್ಟರು ಕಾರಣ

'83' ಸಿನಿಮಾದ ಕನ್ನಡ ಆವೃತ್ತಿಗೆ ಕೇವಲ 6 ಶೋ! ವಿತರಕ ಕೊಟ್ಟರು ಕಾರಣ

'ಪ್ಯಾನ್ ಇಂಡಿಯಾ' ಸಿನಿಮಾದ ಹೆಸರಲ್ಲಿ ಒಂದು ಭಾಷೆಯ ಸಿನಿಮಾವನ್ನು ಮತ್ತೊಂದು ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುವ ಪದ್ಧತಿ ಒಂದೆರಡು ವರ್ಷಗಳಿಂದ ಹೆಚ್ಚಾಗಿದೆ.

ಕನ್ನಡದ ಕೆಲ ಸಿನಿಮಾಗಳು ಸಹ ಬೇರೆ ಭಾಷೆಗೆ ಡಬ್ ಆಗಿ ನೆರೆ ರಾಜ್ಯಗಳಲ್ಲಿ ಬಿಡುಗಡೆ ಕಂಡು ಮೆಚ್ಚುಗೆ ಗಳಿಸಿವೆ.

ಆದರೆ ಬೇರೆ ಭಾಷೆಯ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆ ಮಾಡುತ್ತೇವೆಂದು ನಾಮ್‌ ಕೆ ವಾಸ್ತೆ ಒಂದೆರಡು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ನೂರಾರು ಚಿತ್ರಮಂದಿರಗಳಲ್ಲಿ ಮೂಲ ಭಾಷೆಯಲ್ಲಿಯೇ ಬಿಡುಗಡೆ ಮಾಡಲಾಗುತ್ತಿದೆ.

ಡಿಸೆಂಬರ್ 17 ರಂದು ಬಿಡುಗಡೆ ಆಗಿದ್ದ 'ಪುಷ್ಪ' ಸಿನಿಮಾದ ಕನ್ನಡ ಆವೃತ್ತಿ ಬೆಂಗಳೂರಿನಲ್ಲಿ ಕೇವಲ ಎರಡು ಚಿತ್ರಮಂದಿರದಲ್ಲಿ ಮಾತ್ರವೇ ಬಿಡುಗಡೆ ಆಗಿತ್ತು. ಅದರಲ್ಲಿಯೂ ಒಂದು ಚಿತ್ರಮಂದಿರದಲ್ಲಿ ಶೋ ರದ್ದಾಯಿತು. ಇದೀಗ ರಣ್ವೀರ್ ಸಿಂಗ್ ನಟನೆಯ '83' ಸಿನಿಮಾ ಕನ್ನಡ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಈ ಸಿನಿಮಾದ ಕನ್ನಡ ಆವೃತ್ತಿಗೆ ಮೊದಲ ದಿನ ಸಿಕ್ಕಿರುವುದು ಕೇವಲ ಆರು ಶೋಗಳು! ಹೀಗೆ ಆಗುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು '83' ಸಿನಿಮಾವನ್ನು ವಿತರಣೆ ಮಾಡುತ್ತಿರುವ ಜಾಕ್ ಮಂಜು ವಿವರಿಸಿದ್ದಾರೆ.

ಸುದೀಪ್ ಪ್ರೆಸೆಂಟ್ ಮಾಡಿರುವ ಸಿನಿಮಾ

ಶಾಲಿನಿ ಆರ್ಟ್ಸ್ ಮೂಲಕ '83' ಸಿನಿಮಾವನ್ನು ಕರ್ನಾಟಕದಲ್ಲಿ ಸುದೀಪ್ ಬೆಂಬಲದೊಂದಿಗೆ ಜಾಕ್ ಮಂಜು ವಿತರಣೆ ಮಾಡುತ್ತಿದ್ದಾರೆ. ಸಿನಿಮಾದ ಕನ್ನಡ ಆವೃತ್ತಿ ಬಿಡುಗಡೆ ಬಗ್ಗೆ ಮಾತನಾಡಿರುವ ಜಾಕ್‌ ಮಂಜು, ರಾಜ್ಯದಲ್ಲಿ ಸುಮಾರು 50 ಕಡೆ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇವೆ. ಜಿಲ್ಲಾ ಕೇಂದ್ರಗಳಲ್ಲಿ ಒಂದು ಚಿತ್ರಮಂದಿರದಲ್ಲಿ ಹಿಂದಿ ಇದ್ದರೆ ಮತ್ತೊಂದು ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ಇರಲಿದೆ. ಹೀಗೆ ಒಂದು ಸಮತೋಲನವನ್ನು ನಾವು ಕಾಯ್ದುಕೊಂಡಿದ್ದೇವೆ'' ಎಂದಿದ್ದಾರೆ ಜಾಕ್ ಮಂಜು.ಹಿಂದಿ ಆವೃತ್ತಿ ಹೆಚ್ಚು ಪ್ರದರ್ಶನ ಕಾಣಲಿದೆ

''ಬೆಂಗಳೂರಿನಲ್ಲಿ ಹಿಂದಿ ಆವೃತ್ತಿಯೇ ಹೆಚ್ಚು ಪ್ರದರ್ಶನ ಕಾಣಲಿದೆ. ಶೇ 90 ರಷ್ಟು ಭಾಗ ಚಿತ್ರಮಂದಿರಗಳಲ್ಲಿ ಮೂಲ ಭಾಷೆಯಲ್ಲಿಯೇ '83' ಸಿನಿಮಾ ಪ್ರದರ್ಶನಗೊಳ್ಳಲಿದೆ. ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳು ಬಿಡುಗಡೆ ಆಗುತ್ತಿರುವುದು ಹೊಸದು. ನಮ್ಮ ಜನ ಇನ್ನೂ ಡಬ್ಬಿಂಗ್‌ಗೆ ಹೊಂದಿಕೊಳ್ಳಬೇಕು. ಜನ ಹೆಚ್ಚು ಹೆಚ್ಚು ಡಬ್ಬಿಂಗ್ ಸಿನಿಮಾಗಳನ್ನು ಕೇಳಿದಾಗ ಚಿತ್ರಮಂದಿರದವರೂ ಕೇಳುತ್ತಾರೆ. ನಾವು ವಿತರಕರು ಕನ್ನಡ ಡಬ್ಬಿಂಗ್ ವಿತರಣೆ ಮಾಡಲು ತಯಾರಿದ್ದೇವೆ'' ಎಂದರು ಜಾಕ್ ಮಂಜು. ಚಿತ್ರಮಂದಿರದವರಿಗೆ ಭಯವಿದೆ: ಜಾಕ್ ಮಂಜು

''ಹಿಂದಿ ಬರುವವರು ಹಿಂದಿ ಸಿನಿಮಾ ನೋಡಲು ಹೋಗುತ್ತಾರೆ, ಹಿಂದಿ ಬರದವರು ಕನ್ನಡ ಸಿನಿಮಾ ನೋಡಲು ಬರುತ್ತಾರೆ. ಸಿನಿಮಾಗಳ ಕನ್ನಡ ಆವೃತ್ತಿಯನ್ನು ನೋಡಲು ಜನ ಬರುತ್ತಾರೊ ಇಲ್ಲವೊ ಎಂಬ ಬಗ್ಗೆ ಚಿತ್ರಮಂದಿರದವರಿಗೆ ಭಯ ಇದೆ. ಯಾವುದಾದರೂ ಒಂದು ಪರಭಾಷೆಯ ಸಿನಿಮಾದ ಕನ್ನಡ ವರ್ಷನ್ ದೊಡ್ಡ ಹಿಟ್ ಆದಾಗ ಸಹಜವಾಗಿಯೇ ಚಿತ್ರಮಂದಿರಗಳಿಗೂ ನಂಬಿಕೆ ಬರುತ್ತದೆ. ಆದರೆ ಇದು ನಾಳೆಯೋ ನಾಡಿದ್ದೊ ಆಗಿಹೋಗುವ ಘಟನೆಯಲ್ಲ ತುಸು ಸಮಯ ಹಿಡಿಯುತ್ತದೆ'' ಎಂದು ವಿಶ್ಲೇಷಿಸಿದ್ದಾರೆ ಜಾಕ್ ಮಂಜು. ಮುಂದುವರೆದು, ''ಈ ಹಿಂದೆ ಹಿಂದಿಯ 'ದಬಂಗ್ 3', ತೆಲುಗಿನ 'ಸೈರಾ ನರಸಿಂಹಾ ರೆಡ್ಡಿ' ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆ ಆಗಿದ್ದವು. ಆ ಸಿನಿಮಾಗಳಿಗೆ ಹೆಚ್ಚು ಚಿತ್ರಮಂದಿರ ಸಿಕ್ಕಿತ್ತು ಏಕೆಂದರೆ ಅದರಲ್ಲಿ ಕನ್ನಡದ ನಟರು ನಟಿಸಿದ್ದರು'' ಎಂದೂ ಸಹ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಎಷ್ಟು ಶೋ?

83' ಸಿನಿಮಾವು ಡಿಸೆಂಬರ್ 24 ರಂದು ಬಿಡುಗಡೆ ಆಗುತ್ತಿದ್ದು, ಬೆಂಗಳೂರು ಒಂದರಲ್ಲಿಯೇ ಮೊದಲ ದಿನ ಸುಮಾರು 90 ಶೋಗಳು ಸಿನಿಮಾದ ಹಿಂದಿ ಆವೃತ್ತಿಗೆ ದೊರಕಿವೆ. ಮೈಸೂರಿನಲ್ಲಿಯೂ 50 ಕ್ಕೂ ಹೆಚ್ಚು ಶೋಗಳು '83' ಸಿನಿಮಾದ ಹಿಂದಿ ಆವೃತ್ತಿಗೆ ದೊರಕಿವೆ. ಡಿಸೆಂಬರ್ 24 ರಂದೇ ಕನ್ನಡದ 'ರೈಡರ್', ಡಾಲಿ ಧನಂಜಯ್ ನಟಿಸಿರುವ 'ಬಡವ ರಾಸ್ಕಲ್' ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ತೆಲುಗಿನ ನಟ ನಾನಿ, ಸಾಯಿ ಪಲ್ಲವಿ ನಟಿಸಿರುವ 'ಶ್ಯಾಮ ಸಿಂಘ ರಾಯ್' ಸಹ ಅಂದೇ ಬಿಡುಗಡೆ ಆಗುತ್ತಿದೆ. ಈ ಸಿನಿಮಾಗಳಿಗೂ ಸಾಕಷ್ಟು ಶೋಗಳು ಡಿಸೆಂಬರ್ 24ರಂದು ದೊರಕಿವೆ.