ರೈತರ ಪ್ರತಿಭಟನೆ ಅಂತ್ಯ?: ಗೃಹ ಸಚಿವ, ಕೃಷಿ ಸಚಿವರನ್ನು ಭೇಟಿಯಾಗಲಿರುವ ಎಸ್ ಕೆಎಂ ಸಮಿತಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಅಂತ್ಯಗೊಳುವ ಸಾಧ್ಯತೆ ಇದ್ದು, ಸಂಯುಕ್ತ ಕಿಸಾನ್ ಮೋರ್ಚದ ಸಮಿತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ ಕೃಷಿಗೆ ಸಂಬಂಧಿಸಿದಂತೆ ಬಾಕಿ ಇರುವ ತಮ್ಮ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ.

ಇದೇ ವೇಳೆ ಎಸ್ ಕೆಎಂ ರೈತ ಸಂಘಟನೆಗಳೊಂದಿಗೆ ಸಿಂಘು ಗಡಿ ಭಾಗದಲ್ಲಿ ಮಹತ್ವದ ಸಭೆ ನಡೆಸಲಿದ್ದು ಪ್ರತಿಭಟನೆಗೆ ಸಂಬಂಧಿಸಿದಂತೆ ಮುಂದೇನು ಮಾಡಬೇಕೆಂಬ ನಿರ್ಣಯ ಕೈಗೊಳ್ಳಲಿದೆ ಎಂದು ಹಿರಿಯ ರೈತ ನಾಯಕರೊಬ್ಬರು ತಿಳಿಸಿದ್ದಾರೆ.

ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ವರ್ತನೆ ಸಕಾರಾತ್ಮಕವಾಗಿದೆ. ರೈತ ಚಳುವಳಿ ವಿಷಯವಾಗಿ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳುವ ಸೂಚನೆಯನ್ನು ಸರ್ಕಾರ ನೀಡಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚ ತಿಳಿಸಿದೆ. ಪ್ರತಿಭಟನಾ ನಿರತ ರೈತರ ವಿರುದ್ಧದ ನಕಲಿ ಕೇಸ್ ಗಳನ್ನು ಹಿಂಪಡೆಯಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ರೈತ ಸಂಘಟನೆಗಳು ಸರ್ಕಾರದ ಮುಂದಿಟ್ಟಿವೆ.