ಪರಿಷತ್ ಚುನಾವಣೆಗೆ ಸಕಲ ಸಿದ್ಧತೆ. ಜಿಲ್ಲಾಧಿಕಾರಿ. | Dharwad |
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಾಳೆ ಮತದಾನ ನಡೆಯಲಿದ್ದು, ಅದಕ್ಕಾಗಿ ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಯಿತು. ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳನ್ನೊಳಗೊಂಡು ಈ ಚುನಾವಣೆ ನಡೆಯಲಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ತಹಶೀಲ್ದಾರ ಕಚೇರಿಯಲ್ಲಿ ಚುನಾವಣೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳನ್ನು ವಿತರಿಸಲಾಯಿತು. ಚುನಾವಣಾಧಿಕಾರಿಗಳೂ ಆದ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಹಶೀಲ್ದಾರ ಕಚೇರಿಗೆ ಆಗಮಿಸಿ ಮತದಾನದ ಪೂರ್ವಸಿದ್ಧತೆ ವೀಕ್ಷಿಸಿದರು. ಅನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ಜಿಲ್ಲೆಯ ಎಲ್ಲ ತಹಶೀಲ್ದಾರ ಕಚೇರಿಯಲ್ಲಿ ಮಸ್ಟರಿಂಗ್ ನಡೆಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 144, ಗದಗ ಜಿಲ್ಲೆಯಲ್ಲಿ 130 ಹಾಗೂ ಹಾವೇರಿ ಜಿಲ್ಲೆಯಲ್ಲಿ 230 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಟ್ಟು 504 ಮತಗಟ್ಟೆಗಳಿಗೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 7451 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಧಾರವಾಡ, ಹಾವೇರಿಯ ಸಂಸದರು, ಧಾರವಾಡದ 7, ಹಾವೇರಿಯ 6, ಗದಗನ 4 ಜನ ಶಾಸಕರು ಮತದಾನ ಮಾಡಲು ಅರ್ಹರಿರುತ್ತಾರೆ. ಪ್ರಸ್ತುತ ಧಾರವಾಡದಲ್ಲಿ 3 ಜನ ವಿಧಾನ ಪರಿಷತ್ ಸದಸ್ಯರು ಮತದಾನ ಮಾಡಲಿದ್ದಾರೆ ಎಂದರು.