ನವೋದಯ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ನವೋದಯ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ದಾವಣಗೆರೆ: ಚನ್ನಗಿರಿ ನವೋದಯ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಶಾಲಾ/ಕಾಲೇಜು, ನರ್ಸಿಂಗ್, ಅರೆ ವೈದ್ಯಕೀಯ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಡಿ. 1ರಿಂದ 11ರ ವರೆಗೆ 4882 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 3,667 ಫಲಿತಾಂಶ ಬಂದಿದ್ದು, 1,215 ಫಲಿತಾಂಶ ಬರಬೇಕಿದೆ. ಅದರಲ್ಲಿ ಶನಿವಾರ 625 ವಿದ್ಯಾರ್ಥಿಗಳ ಗಂಟಲು ದ್ರವ ತೆಗೆದುಕೊಳ್ಳಲಾಗಿತ್ತು.

ಭಾನುವಾರ 544 ನೆಗೆಟಿವ್ ಮತ್ತು 4 ಪಾಸಿಟಿವ್ ಆಗಿವೆ. ನಾಲ್ವರೂ ಕೂಡ ಚನ್ನಗಿರಿ ದೇವರಹಳ್ಳಿಯಲ್ಲಿರುವ ನವೋದಯ ಶಾಲೆಯ ಮಕ್ಕಳಾಗಿದ್ದಾರೆ.

ನಾಲ್ವರು ವಿದ್ಯಾರ್ಥಿಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನವೋದಯ ಶಾಲೆಯ ಎಲ್ಲ 514 ವಿದ್ಯಾರ್ಥಿಗಳು, 25 ಶಿಕ್ಷಕರ ಗಂಟಲು ದ್ರವ ಸಂಗ್ರಹಿಸಲಾಗಿದೆ. ನವೋದಯ ಶಾಲೆಯನ್ನು ಸೀಲ್ ಡೌನ್ ಮಾಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಜಿ.ಡಿ. ರಾಘವನ್ ತಿಳಿಸಿದ್ದಾರೆ.