ದೇವರ ಮೂರ್ತಿಗಾಗಿ ಜಾತ್ರೆಯಲ್ಲಿ ಬಡಿದಾಡಿಕೊಳ್ಳುವ ಜನ! ಕರ್ನಾಟಕದ ಗಡಿಯೊಲ್ಲೊಂದು ಭಯಾನಕ ಆಚರಣೆ
ಬಳ್ಳಾರಿ: ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳು ಇವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಇನ್ನು ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅಂಥದ್ದೇ ಆಚರಣೆ ಇದೀಗ ಕರ್ನಾಟಕದ ಗಡಿಯಲ್ಲಿರುವ ಆಂಧ್ರ ಪ್ರದೇಶದ ದೇವರಗಟ್ಟು ಗ್ರಾಮದಲ್ಲಿ ನಡೆಯುವ ಮಾಳ ಮಲ್ಲೇಶ್ವರ ಜಾತ್ರೆಯಲ್ಲಿ ಕಂಡುಬಂದಿದೆ.
ಆಂಧ್ರದ ದೇವರುಗಟ್ಟು ಗ್ರಾಮ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಮೀಪದಲ್ಲಿದೆ. ದೇವರಗಟ್ಟು ಗ್ರಾಮದಲ್ಲಿ ಪ್ರತಿ ವರ್ಷ ಮಾಳ ಮಲ್ಲೇಶ್ವರ ಜಾತ್ರೆ ನಡೆಯುತ್ತದೆ. ಇದೊಂದು ಭಯಾನಕ ಬಡಿಗೆ ಬಡಿದಾಟದ ಜಾತ್ರೆಯಾಗಿದೆ. ಈ ಜಾತ್ರೆಯ ಆಚರಣೆ ಮತ್ತು ಹಿನ್ನೆಲೆಯು ಸಹ ಹುಬ್ಬೇರಿಸುವಂತಿದೆ.
ಅಂದಹಾಗೆ ಈ ಜಾತ್ರೆಯಲ್ಲಿ ಕರ್ನಾಟಕದ ಭಕ್ತರೇ ಹೆಚ್ಚು ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ. ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಪ್ರತಿ ವರ್ಷದ ಜಾತ್ರೆ ಸಮಯದಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಗೆ ಬಂದ ಭಕ್ತರು ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗೆ 5ರ ವರಗೆ ಬಡಿಗೆ ಹಿಡಿದು ಬಡಿದಾಡಿಕೊಳ್ಳುತ್ತಾರೆ. ಇದು ಎರಡು ಗ್ರಾಮಗಳ ನಡುವೆ ನಡೆಯುವ ಸಾಂಪ್ರದಾಯಕ ಬಡಿಗೆ ಬಡಿದಾಟವಾಗಿದೆ. ಸಂಪ್ರದಾಯದಂತೆ ಈ ವರ್ಷವೂ ಕೈಯಲ್ಲಿ ಬಡಿಗೆಗಳನ್ನ ಹಿಡಿದು ಒಬ್ಬರಿಗೊಬ್ಬರು ಜನ ಬಡಿದಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಜಾತ್ರೆಗಳು ಅಂದರೆ, ದೇವರ ಪೂಜೆ-ಪುನಸ್ಕಾರ ಮಾಡಿ ಸಂಭ್ರಮಾಚರಣೆ ಮಾಡುತ್ತಾರೆ. ಆದರೆ, ಈ ಜಾತ್ರೆಯಲ್ಲಿ ದೇವರ ಮೂರ್ತಿಯನ್ನು ತಮ್ಮೂರಿಗೆ ಒಯ್ಯುವ ಪೈಪೋಟಿಯಲ್ಲಿ ಭಕ್ತರು ಬಡಿದಾಡಿಕೊಳ್ಳುತ್ತಾರೆ. ಈ ಆಚರಣೆ ಹಲವಾರು ಬಾರಿ ರಕ್ತಚರಿತ್ರೆಯನ್ನೇ ಬರೆದಿದೆ. ಪ್ರತಿ ವರ್ಷ ದಸರಾ ಹಬ್ಬದ ದಿನ ನಡೆಯುವ ಪೂಜೆ ಬಳಿಕ ರಾತ್ರಿ ಉತ್ಸವ ಮೂರ್ತಿಯನ್ನು ಹೊರಗೆ ತರಲಾಗುತ್ತದೆ. ಆಗ ಅರಕೇರ ಮತ್ತು ನೇರಣಿಕಿ ಗ್ರಾಮಸ್ಥರು ದೇವರ ಉತ್ಸವ ಮೂರ್ತಿಗಾಗಿ ಬಡಿದಾಡಿಕೊಳ್ಳುತ್ತಾರೆ. ತಮ್ಮ ಊರಿಗೆ ದೇವರನ್ನು ತೆಗೆದುಕೊಂಡು ಹೋಗುವ ಪೈಪೋಟಿಯಲ್ಲಿ ಬಡಿಗೆ ಹಿಡಿದು ಬಡಿದಾಡಿಕೊಳ್ಳುತ್ತಾರೆ. ದೇವರ ಮೂರ್ತಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋದರೆ ಒಳ್ಳೆಯದಾಗ್ತದೆ ಎನ್ನುವ ನಂಬಿಕೆ ಇದೆ. ಆದರೆ, ಬಡಿದಾಟದಲ್ಲಿ ಈ ಬಾರಿಯೂ ಹಲವರಿಗೆ ಗಾಯಗಳಾಗಿದೆ.
ಜಾತ್ರೆಯಲ್ಲಿ ಸೇಡಿನ ಹೊಡೆದಾಟ
ಭಯಾನಕ ಬಡಿಗೆ ಬಡಿದಾಟದ ಜಾತ್ರೆಯಲ್ಲಿ ಸೇಡಿನ ಹೊಡೆದಾಟವು ಸಾಮಾನ್ಯವಾಗಿದೆ. ಸೇಡು ತೀರಿಸಿಕೊಳ್ಳಲು ಈ ಜಾತ್ರೆಯನ್ನೇ ಕೆಲ ಜನ ಬಂಡವಾಳ ಮಾಡಿಕೊಳ್ಳುತ್ತಾರೆ. ತಮಗೆ ಆಗದವರ ಮೇಲೆ ಬಡಿಗೆ ಪ್ರಯೋಗ ಮಾಡಿ ಸೇಡು ತೀರಿಸಿಕೊಳ್ಳುತ್ತಾರೆ. ರಾತ್ರಿ ನಡೆದ ಜಾತ್ರೆಯಲ್ಲಿ ಸೆರೆಯಾದ ಭಯಾನಕ ದೃಶ್ಯಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕರೊನಾ ಹಿನ್ನೆಲೆ ಈ ಜಾತ್ರೆಗೆ ಆಂಧ್ರ ಸರ್ಕಾರ ಬ್ರೇಕ್ ಹಾಕಿದ್ದರೂ ಅದ್ಧೂರಿ ಜಾತ್ರೆ ಮಾತ್ರ ನಡೆಯುತ್ತಿದೆ. ಹೆಸರಿಗೆ ಮಾತ್ರ ಜಾತ್ರೆ ರದ್ದು ಅಂತಾ ಹೇಳಿ, ಪರೋಕ್ಷವಾಗಿ ಜಾತ್ರೆಗೆ ಸರ್ಕಾರ ಅವಕಾಶ ಮಾಡಿ ಕೊಟ್ಟಿದೆ. ಬೇಕಾದಷ್ಟು ಪೊಲೀಸ್ ನಿಯೋಜನೆ ಮಾಡದೇ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಜಾತ್ರೆ ಆಂಧ್ರದಲ್ಲಿ ನಡೆದರೂ ಅದರ ನೇರ ಪರಿಣಾಮ ಕರ್ನಾಟಕದ ಮೇಲಿದೆ. ಏಕೆಂದರೆ, ಜಾತ್ರೆಯಲ್ಲಿ ಭಾಗಿಯಾಗುವ ಶೇಕಡಾ 60 ರಷ್ಟು ಜನ ಕರ್ನಾಟಕದವರೇ. ಹೀಗಾಗಿ ಗಾಯಗೊಳ್ಳುವ ಜನರು ಸಹ ಕರ್ನಾಟಕದವರೇ ಆಗಿರುತ್ತಾರೆ.