ಬಿಜೆಪಿ ಸೇರ್ಪಡೆ ಕುರಿತು ಸದ್ಯದಲ್ಲೇ ತೀರ್ಮಾನ: ವರ್ತೂರು ಪ್ರಕಾಶ್ ಹೇಳಿಕೆ
ಕೋಲಾರ: 'ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕಾ ಎಂಬ ಬಗ್ಗೆ ಬೆಂಬಲಿಗರು ಹಾಗೂ ಮುಖಂಡರೊಂದಿಗೆ ಚರ್ಚಿಸಿ ಸದ್ಯದಲ್ಲೇ ತೀರ್ಮಾನ ಮಾಡುತ್ತೇನೆ' ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದರು.
ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಮುನಿರತ್ನ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 'ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿ ಮತದಾರರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಬಿಜೆಪಿ ಮುಖಂಡರು ನನ್ನ ಬೆಂಬಲ ಕೋರಿದ್ದಾರೆ. ನಾನು ಕಾಲಾವಕಾಶ ಕೇಳಿದ್ದು, ಬೆಂಬಲಿಗರ ಸಲಹೆ ಪಡೆದು ಭಾನುವಾರ ನಿರ್ಧಾರ ಪ್ರಕಟಿಸುತ್ತೇನೆ' ಎಂದು ತಿಳಿಸಿದರು.
'ಭವಿಷ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಾತ್ರ ಉಳಿಯುತ್ತವೆ. ಈ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದ ಸಿದ್ಧಾಂತಗಳು ಈಗಿಲ್ಲ. ಕಳ್ಳರು-ಖದೀಮರಿಗೆ ಕಾಂಗ್ರೆಸ್‍ನಿಂದ ಟಿಕೆಟ್ ಕೊಡಲಾಗಿದೆ. ಆದರೆ, ಬಿಜೆಪಿಯು ವೈದ್ಯರಿಗೆ ಟಿಕೆಟ್ ಕೊಟ್ಟು ಗೌರವ ಕಾಪಾಡಿಕೊಂಡಿದೆ. ನನ್ನ ರಾಜಕೀಯ ಭವಿಷ್ಯ ಮನಸ್ಸಿನಲ್ಲಿಟ್ಟುಕೊಂಡು ಸೂಕ್ತ ತೀರ್ಮಾನ ಮಾಡುತ್ತೇನೆ' ಎಂದರು.
'ಕೋಲಾರ ಜಿಲ್ಲಾ ಕೇಂದ್ರದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಕ್ಷೇತ್ರದ ಶಾಸಕರು ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಎರಡೂ ಕಡೆಯೂ ಹೆಸರು ಕೆಡಿಸಿಕೊಂಡಿರುವ ಒಂದು ರೂಪಾಯಿ ಅನುದಾನ ಬಂದಿಲ್ಲ. ಬಿಜೆಪಿ ಸರ್ಕಾರ ಇನ್ನೂ ಒಂದೂವರೆ ವರ್ಷ ಇರಲಿದ್ದು, ಅನುದಾನ ಕೊಡುವಂತೆ ಕೋರುತ್ತೇನೆ. ಉಸ್ತುವಾರಿ ಸಚಿವ ಮುನಿರತ್ನ ಅವರ ಕುತ್ತಿಗೆ ಪಟ್ಟಿ ಹಿಡಿದು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿಸಿದ್ದೇನೆ, ಅನುದಾನ ಕೊಡಿ ಎಂದು ಕೇಳುತ್ತೇನೆ' ಎಂದು ನುಡಿದರು.
ಆಪರೇಷನ್ ಮಾಡುತ್ತಿದ್ದೇವೆ: ಆಪರೇಷನ್ ಕಮಲದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, 'ಒಳ್ಳೆಯ ಆಡಳಿತ, ಸರ್ಕಾರ ನೀಡಲು ಹಾಗೂ ರಚಿಸಲು ಇಂತಹದ್ದನ್ನು ಮಾಡುತ್ತಿದ್ದೇವೆ. ಆಪರೇಷನ್ ಕಮಲ ಎಂದು ಕರೆಯುವುದಾದರೆ, ಹೌದು ಆಪರೇಷನ್ ಮಾಡುತ್ತಿದ್ದೇವೆ' ಎಂದರು.
'ವರ್ತೂರ್ ಪ್ರಕಾಶ್ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದು, ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಅವರು ಹೇಳಿದ್ದಾರೆ. ಅವರು ಬೆಂಬಲಿಗರು ಹಾಗೂ ಹೆಚ್ಚಿನ ಕಾರ್ಯಕರ್ತರೊಂದಿಗೆ ಬಿಜೆಪಿಪಿಗೆ ಸೇರ್ಪಡೆಯಾಗುವ ವಿಶ್ವಾಸವಿದೆ' ಎಂದು ಹೇಳಿದರು.
ಪಕ್ಷದ್ರೋಹಿಗೆ ಟಿಕೆಟ್: ಸಚಿವರ ಜತೆಗಿದ್ದ ಕೆ.ಚಂದ್ರಾರೆಡ್ಡಿ, 'ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದ ಅನಿಲ್‌ಕುಮಾರ್‌ಗೆ ಕಾಂಗ್ರೆಸ್ ವರಿಷ್ಠರು ಮಣೆ ಹಾಕಿದ್ದಾರೆ. ಕಾಂಗ್ರೆಸ್‍ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'30 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದೆ. ಆದರೆ, ಪಕ್ಷದ ನಾಯಕರು ನನಗೆ ಅನ್ಯಾಯ ಮಾಡಿದರು. ಜಿಲ್ಲೆಯಲ್ಲಿ ಪರಿಷತ್ ಚುನಾವಣೆಗೆ 12 ಮಂದಿ ಕಾಂಗ್ರೆಸ್ ಟಿಕೆಟ್‌ನ ಆಕಾಂಕ್ಷಿಗಳಾಗಿದ್ದೆವು. ಎಲ್ಲಾ ಆಕಾಂಕ್ಷಿಗಳನ್ನು ಒಟ್ಟಿಗೆ ಕೂರಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ನಾಯಕರು ಭರವಸೆ ನೀಡಿದ್ದರು. ಆದರೆ, ನಮ್ಮನ್ನು ಕತ್ತಲಲ್ಲಿಟ್ಟು ಅನಿಲ್‌ಕುಮಾರ್‌ರನ್ನು ಆಯ್ಕೆ ಮಾಡಿದ್ದು ನೋವು ತಂದಿದೆ' ಎಂದು ಬೇಸರ ವ್ಯಕ್ತಪಡಿಸಿದರು.
'ಕೆ.ಎಚ್.ಮುನಿಯಪ್ಪ ಸಹ ಪಕ್ಷದ್ರೋಹದ ಕೆಲಸ ಮಾಡಿದ್ದಾರೆ. ಹಿಂದೆಯೇ ಅವರಿಗೆ ತಾವು ಮಾಡಿದ್ದು ತಪ್ಪು ಎಂದು ಹೇಳಿದ್ದೇನೆ. ಒಂದು ಪಕ್ಷದಲ್ಲಿದ್ದಾಗ ಆ ಪಕ್ಷಕ್ಕೆ ನಿಯತ್ತಾಗಿ ದುಡಿಯಬೇಕು. ಇಲ್ಲದಿದ್ದರೆ ಪಕ್ಷ ಬಿಡಬೇಕು. ಆ ಕಾರಣದಿಂದಲೇ ಕಾಂಗ್ರೆಸ್ ತೊರೆದಿದ್ದೇನೆ' ಎಂದು ಸ್ಪಷ್ಟಪಡಿಸಿದರು.
'ನಾಮಪತ್ರ ಸಲ್ಲಿಕೆ ದಿನವೇ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದ್ದೆ. ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮುನ್ಸೂಚನೆ ಸ್ಪಷ್ಟವಾಗಿ ಕಾಣಿಸುತ್ತಿದೆ. ವರ್ತೂರು ಪ್ರಕಾಶ್ ಅವರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲಿದ್ದು, ಪಕ್ಷದ ಗೆಲುವಿಗೆ ಸಹಾಯ ಮಾಡಲಿದ್ದಾರೆ' ಎಂದು ಸಚಿವ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.