ಎಪಿಎಂಸಿ ಯಾರ್ಡ್‌ಗೆ ಕೊಳಚೆ ನೀರು-ಕ್ರಮಕ್ಕೆ ಒತ್ತಾಯ

ಎಪಿಎಂಸಿ ಯಾರ್ಡ್‌ಗೆ ಕೊಳಚೆ ನೀರು-ಕ್ರಮಕ್ಕೆ ಒತ್ತಾಯ

ಕೋಲಾರ,ಅ,೧೫: ನಗರದ ಮಾಲೂರು ರಸೆಯಲ್ಲಿನ ವಿಜಯನಗರಕ್ಕೆ ಮಳೆ ಬಿದ್ದ ಸಮಯದಲ್ಲಿ ಎಪಿಎಂಸಿ ಯಾರ್ಡ್ ನಿಂದ ಕೊಳಚೆ ನೀರು ನೇರವಾಗಿ ವಿಜಯನಗರಕ್ಕೆ ಹರಿದು ಬರುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಜೊತೆಗೆ ರಸ್ತೆಯಲ್ಲಿ ಹೆಜ್ಜೆ ಇಡಲು ಸಾಧ್ಯವಾಗದಂತೆ ನೀರು ನಿಂತು ದುರ್ವಾಸನೆ ಬೀರುತ್ತಿದೆ.
ಅಲ್ಲಿನ ಕೆಲವು ರೈತರು ತಮ್ಮ ಜಮೀನುಗಳಲ್ಲಿ ಕಷ್ಟ ಬಿದ್ದು ಬೆಳೆದ ಬೆಳೆಯಲ್ಲ ಕೊಳಚೆ ನೀರಿನ ಪಾಲಾಗಿದೆ. ಮೊಣಕಾಲು ಉದ್ದ ನೀರು ಜಮೀನುಗಳಲ್ಲಿ ನಿಂತು ಬೆಳೆದ ಬೆಳೆಯಲ್ಲ ನಾಶವಾಗಿದೆ. ತಗ್ಗು ಪ್ರದೇಶವಾದ ವಿಜಯನಗರದಲ್ಲಿ ಕೊಳಚೆ ನೀರು ಮನೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.
ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ವಿಜಯನಗರ ಮಂಜುನಾಥ್ ಮಾತನಾಡಿ ಮುಖ್ಯವಾಗಿ ಮಳೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆಗಳು ಹಾಗೂ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡಿರುವುದೇ ಕಾರಣ. ಇದರಿಂದಾಗಿ ನಮ್ಮ ಬಡಾವಣೆಯ ರಸ್ತೆ ಸೇರಿದಂತೆ ಮನೆಗಳಿಗೆ ತೋಟಗಳಿಗೆ ಎಪಿಎಂಸಿ ಯಾರ್ಡ್ ನಿಂದ ಕೊಳಚೆ ನೀರು ನುಗ್ಗಿ ಸಮಸ್ಯೆ ಹೆಚ್ಚಾಗಿದೆ ಎಂದಿದ್ದಾರೆ.
ಅನೇಕ ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಐದು ದಿನ ಕಾಲ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡುತ್ತಿದ್ದು ನಮ್ಮ ವಿಜಯನಗರಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸಚಿವ ಮುನಿರತ್ನ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನಾಗರಾಜ್, ಗಣೇಶ್, ಉಮೇಶ್, ಸಂತೋಷ್, ಮುನಿ ನಾರಾಯಣಪ್ಪ, ವಿಜಿಯಮ್ಮ, ಕನ್ಯಾಕುಮಾರಿ ,ಶೋಯಬ್, ವೆಂಕಟರಾಜ ಮತ್ತಿತರರಿದ್ದರು.