ಮಾಜಿ ಸಿಎಂಗಳ ನಡುವೆ ಮಾತಿನ ಯುದ್ಧ; ಬಿಎಸ್​​ವೈಗೆ ಪ್ರಶ್ನೆಗಳ ಸುರಿಮಳೆಗೈದ ಸಿದ್ದರಾಮಯ್ಯ

ಮಾಜಿ ಸಿಎಂಗಳ ನಡುವೆ ಮಾತಿನ ಯುದ್ಧ; ಬಿಎಸ್​​ವೈಗೆ ಪ್ರಶ್ನೆಗಳ ಸುರಿಮಳೆಗೈದ ಸಿದ್ದರಾಮಯ್ಯ

ಬೆಂಗಳೂರು: ಚುನಾವಣೆ ಸಮಯ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪಗಳ ಸುರಿಮಳೆಯಾಗುವ ಸಂಭವ ಹೆಚ್ಚಾಗುತ್ತಿದೆ. ಸದ್ಯ ಇಬ್ಬರು ಮಾಜಿ ಸಿಎಂಗಳಾದ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರ ನಡುವೆ ಮಾತಿನ ಯುದ್ಧ ಆರಂಭವಾಗಿದೆ.

ಬಿಜೆಪಿ ಕೈಗೊಂಡಿರುವ ಜನಸಂಕಲ್ಪ ಯಾತ್ರೆಯಲ್ಲಿ ಸಿದ್ದರಾಮಯ್ಯ ವಿರುದ್ದ ಬಿಎಸ್​ವೈ ವಾಗ್ದಾಳಿ ನಡೆಸಿದ್ದರು. ಇದೀಗ ಸಿದ್ದರಾಮಯ್ಯ ಬಿಎಸ್​​ವೈ ಅವರನ್ನು ಟೀಕಿಸುವ ಮೂಲಕ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

2014ಕ್ಕೂ ಮೊದಲು ಮನಮೋಹನ್ ಸಿಂಗ್ ಸರ್ಕಾರ ರೈತರ ಸಾಲಮನ್ನಾ ಮಾಡಿತ್ತು. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಅಂಬಾನಿ, ಅದಾನಿ ಮುಂತಾದ ಕಾರ್ಪೊರೇಟ್ ಬಂಡವಾಳಿಗರ ಎಷ್ಟು ಸಾಲಮನ್ನಾ ಮಾಡಿದ್ದಾರೆ?

ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಜನರು ಕಟ್ಟುತ್ತಿದ್ದ ತೆರಿಗೆ ಎಷ್ಟು? ಕಾರ್ಪೊರೇಟ್ ಬಂಡವಾಳಿಗರು ಪಾವತಿಸುತ್ತಿದ್ದ ತೆರಿಗೆ ಎಷ್ಟಿತ್ತು? ಈಗ ಎಷ್ಟಿದೆ? ಜನರ ಮೇಲಿನ ತೆರಿಗೆ ಹೆಚ್ಚಿಸಿ ಅದಾನಿ ಅಂಬಾನಿ ಮುಂತಾದವರ ಮೇಲಿದ್ದ ತೆರಿಗೆಯನ್ನು ಶೇ.8 ರಷ್ಟು ಇಳಿಸಿದ್ದು ಯಾಕೆ? 2014 ಕ್ಕೆ ಮೊದಲು ಪೆಟ್ರೋಲ್, ಡೀಸೆಲ್‍ಗಳ ಮೇಲೆ ವಿಧಿಸುತ್ತಿದ್ದ ಸೆಸ್‍ಗಳೆಷ್ಟು? ಮೋದಿಯವರು ವಿಧಿಸುತ್ತಿರುವ ಸೆಸ್‍ಗಳ ಪ್ರಮಾಣವೆಷ್ಟು?

2014 ಕ್ಕೆ ಮೊದಲು ದೇಶದಲ್ಲಿ ನಿರುದ್ಯೋಗದ ಪ್ರಮಾಣ ಎಷ್ಟಿತ್ತು? ಈಗ ಎಷ್ಟಿದೆ? 2014ಕ್ಕೆ ಮೊದಲು ರೈತರ ತಲೆಯ ಮೇಲೆ, ದೇಶದ ಜನರ ತಲೆಯ ಮೇಲೆ ಇದ್ದ ಸಾಲವೆಷ್ಟು? ಈಗ ಎಷ್ಟಿದೆ? ರೈತರ ಹಾಗೂ ಇತರೆ ಜನಸಮುದಾಯಗಳ ಆದಾಯ ಎಷ್ಟಿತ್ತು? ಈಗ ಎಷ್ಟಿದೆ? 2014ಕ್ಕಿಂತ ಮೊದಲು ದೇಶದ ಮೇಲೆ 53 ಲಕ್ಷ ಕೋಟಿ ಇದ್ದದ್ದು ಈಗ 155 ಲಕ್ಷ ಕೋಟಿಗೆ ಏರಿಸಿ ದೇಶವನ್ನು ದಿವಾಳಿ ಮಾಡಿದ್ದು ಮೋದಿಯವರಲ್ಲವೆ?

2018 ಕ್ಕೆ ಮೊದಲು 2.42 ಲಕ್ಷ ಕೋಟಿ ಇದ್ದ ರಾಜ್ಯದ ಸಾಲವು ಈ ವರ್ಷದ ಕೊನೆಯ ಹೊತ್ತಿಗೆ 5.30 ರಿಂದ 5.40 ಲಕ್ಷ ಕೋಟಿಗಳವರೆಗೆ ಏರಿಕೆಯಾಗಲು ಕಾರಣವೇನು? ಕೇಂದ್ರ ಸರ್ಕಾರ ಅಡುಗೆ ಸಿಲಿಂಡರಿನ ಮೇಲೆ ಈಗ ಎಷ್ಟು ಸಬ್ಸಿಡಿಗಳನ್ನು ನೀಡುತ್ತಿದೆ? ಕಳೆದ 8 ವರ್ಷಗಳ ಸರಾಸರಿ ಜಿಡಿಪಿ ಬೆಳವಣಿಗೆ ಎಷ್ಟು? ಮೇಕ್ ಇನ್​ ಇಂಡಿಯಾ ಎಂದು ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ದುಪ್ಪಟ್ಟು ಮಾಡಿದ್ದು ಯಾಕೆ? ಎಂದು ಬಿಎಸ್​ವೈ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.