ದೇವರ ದರ್ಶನ ಮುಗಿಸಿ ವಾಪಾಸ್ ಆಗುತ್ತಿದ್ದ ಟಾಟಾ ಏಸ್ ಲಾರಿಗೆ ಡಿಕ್ಕಿ : ಸ್ಥಳದಲ್ಲೇ ಇಬ್ಬರ ಸಾವು, ಹಲವರು ಗಂಭೀರ

ಹಾಸನ : ಆದಿಚುಂಚನಗಿರಿಗೆ ತೆರಳಿ, ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ, ಬೆಳ್ಳೂರು ಕ್ರಾಸ್ ಬಳಿ ಟಾಟಾ ಏಸ್ ಲಾರಿ ನಡುವೆ ಡಿಕ್ಕಿಯಾಗಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಚಾಲಕ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಡ್ಯದ ಕೆ ಆರ್ ಪೇಟೆ ತಾಲೂಕಿನ ಅಗ್ರಹಾರ ಬಾಚನಹಳ್ಳಿಯ ಜಯರಾಮೇಗೌಡ ಮತ್ತು ಅವರ ಕುಟುಂಬಸ್ಥರು ಆದಿಚುಂಚನಗಿರಿಗೆ ದೇವರ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ಟಾಟಾ ಏಸ್ ಹಾಸನ ಜಿಲ್ಲೆಯ ಬೆಳ್ಳೂರು ಕ್ರಾಸ್ ಬಳಿ ಲಾರಿಗೆ ಡಿಕ್ಕಿಯಾಗಿದೆ.
ಡಿಕ್ಕಿಯ ರಬಸಕ್ಕೆ ಟಾಟಾ ಏಸ್ ಮುಂಭಾಗ ನಜ್ಜುಗುಜ್ಜಾಗಿದ್ದು, ಮುಂದೆ ಕುಳಿತಿದ್ದಂತ ಯೋಗೇಶ್(30) ಹಾಗೂ ಬೇಬಿ(18) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಚಾಲಕ ಸೇರಿದಂತೆ ಹಲವರ ಸ್ಥಿತಿ ಗಂಭೀರವಾಗಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.