ರಸ್ತೆ ಗುಂಡಿಯಿಂದ ಕೆಳಗೆ ಬಿದ್ದ ಬೈಕ್​ ಸವಾರ ಅರ್ಧ ದಿನ ಅಲ್ಲಿಯೇ ಕುಳಿತು ಪ್ರತಿಭಟನೆ: ಮನವೊಲಿಸಲು ಪೊಲೀಸರ ಪರದಾಟ

ರಸ್ತೆ ಗುಂಡಿಯಿಂದ ಕೆಳಗೆ ಬಿದ್ದ ಬೈಕ್​ ಸವಾರ ಅರ್ಧ ದಿನ ಅಲ್ಲಿಯೇ ಕುಳಿತು ಪ್ರತಿಭಟನೆ: ಮನವೊಲಿಸಲು ಪೊಲೀಸರ ಪರದಾಟ

ಬೆಂಗಳೂರು: ರಸ್ತೆ ಗುಂಡಿಯಿಂದಾಗಿ ಬೈಕ್​ನಿಂದ ಕೆಳಗೆ ಬಿದ್ದ ಸವಾರನೊಬ್ಬ ಅಲ್ಲಿಯೇ ಅರ್ಧ ದಿನ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ಹಲಸೂರಿನ ಮುಖ್ಯರಸ್ತೆಯಲ್ಲಿ ನಡೆದಿದೆ.

ಬೈಕ್ ಸವಾರ ತನ್ನ ಕುಟುಂಬದೊಂದಿಗೆ ಹೋಗುತ್ತಿದ್ದಾಗ ರಸ್ತೆ ಗುಂಡಿಯಿಂದಾಗಿ ಬೈಕ್ ಬಿದ್ದಿದೆ.

ಇದರಿಂದ ಆಕ್ರೋಶಗೊಂಡ ಬೈಕ್​ ಸವಾರ ತನ್ನ ಬೈಕ್​ ಅನ್ನು ಬಿದ್ದ ಸ್ಥಳದಲ್ಲೇ ಪಾರ್ಕ್​ ಮಾಡಿ, ರಸ್ತೆ ಗುಂಡಿ ಪಕ್ಕದಲ್ಲೇ ಕುಳಿತು ಅರ್ಧ ದಿನ ಪ್ರತಿಭಟನೆ ನಡೆಸಿದ್ದಾನೆ.

ಪ್ರತಿಭಟನೆಯಿಂದ ರಸ್ತೆಯಲ್ಲಿ ಸಂಚಾರಿ ದಟ್ಟಣೆ ಉಂಟಾಗುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೈಕ್ ಸವಾರನನ್ನು ಅಲ್ಲಿಂದ ಎದ್ದೇಳುವಂತೆ ಕೇಳಿದ್ದಾರೆ. ಆದರೆ, ಪೊಲೀಸರ ಮನವಿಗೆ ಸೋಲದ ಸವಾರ ಪ್ರತಿಭಟನೆ ಮುಂದುವರೆಸಿದ್ದ.

ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದಂತೆಯೇ ಅಲ್ಲಿನ ಸ್ಥಳೀಯರು ಕೂಡ ಬೈಕ್ ಸವಾರನಿಗೆ ಬೆಂಬಲ ಸೂಚಿಸಿದ್ದರು. ಈ ವೇಳೆ ಕೆಲ ಕಾಲ ಸ್ಥಳೀಯರು ಮತ್ತು ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು.

ಘಟನೆ ಸಂಬಂಧಿಸಿದ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್​ ತನ್ನ ಅಧಿಕೃತ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡು ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದೆ. ಬೆಂಗಳೂರಿನ ಹಲಸೂರಿನಲ್ಲಿನ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಸುಮಾರು ಅರ್ಧ ದಿನ ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟಿಸಿದ್ದಾರೆ. ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ, ಜನ ಸಾಯುತ್ತಿದ್ದರೂ ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿತ ಬಿಜೆಪಿಗೆ ಬೇಕಿಲ್ಲವೇ? ಈ ಸರ್ಕಾರ ಮಾನ, ಮರ್ಯಾದೆ ಹಾಗೂ ನಾಚಿಕೆ, ಈ ಮೂರನ್ನೂ ಬಿಟ್ಟಿದೆ ಎಂದು ಕಾಂಗ್ರೆಸ್​ ಕಿಡಿಕಾರಿದೆ. ಅಲ್ಲದೆ, ಟ್ರಬಲ್​ ಇಂಜಿನ್​ ಸರ್ಕಾರ ಎಂದು ವ್ಯಂಗ್ಯವಾಡಿದೆ. (ದಿಗ್ವಿಜಯ ನ್ಯೂಸ್​)