ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ 'ಸ್ಪೂರ್ತಿ ದಿನ'ವಾಗಿ ಆಚರಣೆ: ಸರ್ಕಾರ ಘೋಷಣೆ

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಇನ್ನು ಮುಂದೆ 'ಪ್ರೇರಣಾ ದಿನ'ವನ್ನಾಗಿ ಆಚರಣೆ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ.
ಮಾರ್ಚ್ 17, ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವಾಗಿದ್ದು ಆ ದಿನವನ್ನು ಪ್ರೇರಣಾ ದಿನವನ್ನಾಗಿ ಆಚರಿಸಲಾಗುತ್ತದೆ.
ಸರ್ಕಾರದ ಈ ಘೋಷಣೆಯನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸರ್ಕಾರ ಈಗಾಗಲೇ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಮರಣೋತ್ತರವಾಗಿ ಗೌರವಿಸಿದೆ. ಇದೀಗ ಪ್ರೇರಣಾ ದಿನದ ಘೋಷಣೆ ಮಾಡುವ ಮೂಲಕ ಮತ್ತಷ್ಟು ಗೌರವವನ್ನು ಕನ್ನಡಿಗರ ನೆಚ್ಚಿನ ಅಪ್ಪುಗೆ ನೀಡಿದೆ.
ಪುನೀತ್ ರಾಜ್‌ಕುಮಾರ್ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ಅಪ್ಪು ಮಾಡಿದ್ದ ನೇತೃದಾನ ಹಲವರು ನೇತೃದಾನ ಮಾಡಲು ಸ್ಪೂರ್ತಿ ತುಂಬಿತ್ತು. ಅಪ್ಪು ಮಾಡಿದ್ದ ಸಾಮಾಜಿಕ ಕಾರ್ಯಗಳನ್ನು ಸ್ಪುರ್ತಿಯಾಗಿರಿಸಿಕೊಂಡು ಹಲವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಇದೆಲ್ಲವನ್ನೂ ಗಮನಿಸಿ ಸರ್ಕಾರ ಹೀಗೊಂದು ಉತ್ತಮ ಘೋಷಣೆಯನ್ನು ಮಾಡಿದೆ.
ಸಿಎಂ ಬಸವರಾಜ ಬೊಮ್ಮಾಯಿಯವರು ಸ್ವತಃ ಪುನೀತ್ ರಾಜ್‌ಕುಮಾರ್ ಅವರ ಆಪ್ತರು ಮತ್ತು ಅಭಿಮಾನಿಯಾಗಿದ್ದರು. ಪುನೀತ್ ರಾಜ್‌ಕುಮಾರ್ ಅಗಲಿದಾಗ ಖುದ್ದಾಗಿ ಹಾಜರಿದ್ದು ಎಲ್ಲ ಕಾರ್ಯಗಳನ್ನು ಖುದ್ದು ನಿಂತು ಮೇಲ್ವಿಚಾರಣೆ ನಡೆಸಿ ಉತ್ತಮವಾದ ಅಂತಿಮ ಗೌರವ ಸಲ್ಲುವಂತೆ ಕಾಳಜಿ ವಹಿಸಿದ್ದರು.
ಆ ಬಳಿಕವೂ ಹಲವು ಬಾರಿ ಅಪ್ಪು ಬಗ್ಗೆ ಆಪ್ತವಾದ ಭಾವುಕವಾದ ಮಾತುಗಳನ್ನಾಡಿದ್ದರು. ದೊಡ್ಮನೆಯ ದೊಡ್ಡತನವನ್ನು ಸಹ ಹಲವು ಬಾರಿ ಸ್ಮರಿಸಿದ್ದರು. ಇದೀಗ ಪ್ರೇರಣಾ ದಿನ ಆಚರಣೆ ಮೂಲಕ ಮತ್ತೊಮ್ಮೆ ಅಪ್ಪು ಮೇಲಿನ ತಮ್ಮ ಗೌರವ, ಪ್ರೀತಿ ಪ್ರದರ್ಶಿಸಿದ್ದಾರೆ.
ಮುಂದಿನ ತಿಂಗಳು ಅಕ್ಟೋಬರ್ 29 ಕ್ಕೆ ಪುನೀತ್ ರಾಜ್‌ಕುಮಾರ್ ಅಗಲಿ ಒಂದು ವರ್ಷವಾಗುತ್ತಿದೆ.