'ಅಶೋಕ' ಪಟ್ಟಾಭಿಷೇಕಕ್ಕೆ ಬಿಜೆಪಿಯಲ್ಲೇ ಅಪಸ್ವರ

'ಅಶೋಕ' ಪಟ್ಟಾಭಿಷೇಕಕ್ಕೆ ಬಿಜೆಪಿಯಲ್ಲೇ ಅಪಸ್ವರ

ಮಂಡ್ಯ: ಚುನಾವಣೆ ಹೊಸ್ತಿಲಲ್ಲಿರುವಾಗ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ. ಸಚಿವ ಕೆ.ಗೋಪಾಲಯ್ಯ ಅವರನ್ನು ಬದಲಾಯಿಸಿ ಆ ಸ್ಥಾನಕ್ಕೆ ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ನೇಮಿಸಿರುವುದು ಸ್ಥಳೀಯ ಬಿಜೆಪಿ ಮುಖಂಡರ ಅಸಮಾಧಾನ ಸೃಷ್ಟಿಸಿದೆ.

ಜೆಡಿಎಸ್‌ ಜೊತೆ ಹೊಂದಾಣಿಕೆ ರಾಜಕಾರಣ ಮಾಡುವಲ್ಲಿ ಆರ್‌.ಅಶೋಕ್‌ ನಿಸ್ಸೀಮ ನಾಯಕ ಎಂಬ ಆರೋಪ ಜಿಲ್ಲೆಯಲ್ಲಿ ಮೊದಲಿನಿಂದಲೂ ಇದೆ. ಈ ಹಿಂದೆ ಅವರು ಜಲ್ಲೆಗೆ ಬಂದಾಗಲೆಲ್ಲಾ ಜೆಡಿಎಸ್‌ ಜೊತೆ ಹೊಂದಾಣಿಕೆಯಾದ ಉದಾಹರಣೆಗಳಿವೆ. ಈಗಲೂ ಹೊಂದಾಣಿಕೆಗಾಗಿಯೇ ಅಶೋಕ್‌ ಜಿಲ್ಲೆಗೆ ಕಾಲಿಟ್ಟಿದ್ದಾರೆ ಎಂದು ಬಿಜೆಪಿ ಮುಖಂಡರು ಬಹಿರಂಗವಾಗಿಯೇ ಆರೋಪಿಸಿದ್ದಾರೆ.

ಕೆ.ಆರ್‌.ಪೇಟೆ ಉಪ ಚುನಾವಣೆ ಗೆಲ್ಲುವವರೆಗೂ ಜಿಲ್ಲೆಯ ಇತಿಹಾಸದಲ್ಲಿ ಬಿಜೆಪಿಗೆ ಸ್ವತಂತ್ರ ಸ್ಥಾನವಿರಲಿಲ್ಲ. ಕಾರ್ಯಕರ್ತರು ಪಕ್ಷ ಕಟ್ಟಲು ಶ್ರಮಿಸಿದರೂ ಚುನಾವಣೆ ಸಮಯದಲ್ಲಿ ನಡೆಯುತ್ತಿದ್ದ ಹೊಂದಾಣಿಕೆ ಆಟ ಅವರ ಶ್ರಮವನ್ನು ಮಣ್ಣುಪಾಲು ಮಾಡುತ್ತಿತ್ತು. ಬಿಜೆಪಿಯದ್ದೇ ಮತ ಬ್ಯಾಂಕ್‌ ಇದ್ದರೂ ರಾಜಕೀಯ ನಾಟಕದಿಂದ ಅವು ಅನ್ಯ ಪಕ್ಷಗಳ ಪಾಲಾಗುತ್ತಿದ್ದವು.

ಜಿಲ್ಲೆಯಲ್ಲಿ ಆರ್‌.ಅಶೋಕ್‌ ಎಂದರೆ 'ಹೊಂದಾಣಿಕೆ ಆಟಕ್ಕೆ' ಹೆಸರುವಾಸಿಯಾಗಿದ್ದು ಸದ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದು ಪಕ್ಷ ಕಟ್ಟಲು ದುಡಿಯುತ್ತಿರುವ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ. ಮಂಡ್ಯ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಗೊಳಿಸಲು ಮೊದಲೆಂದಿಗಿಂತಲೂ ದೊಡ್ಡ ಮಟ್ಟದ ಪ್ರಯತ್ನಗಳು ಈಗ ನಡೆಯುತ್ತಿವೆ. ಕಾರ್ಯಕರ್ತರ ಸಂಖ್ಯೆಯೂ ಹೆಚ್ಚುತ್ತಿದ್ದು ಹಲವು ಕ್ಷೇತ್ರಗಳಲ್ಲಿ ಕಮಲ ಅರಳುವ ಭರವಸೆ ಮೂಡಿದೆ.

ಇಂತಹ ಸಂದರ್ಭದಲ್ಲಿ ಆರ್‌.ಅಶೋಕ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾಲಿಟ್ಟಿರುವುದು ಕಾರ್ಯಕರ್ತರ ಉತ್ಸಾಹ ಕುಗ್ಗಿಸಿದೆ. ಮುಂದಿನ ವಿಧಾನಸಬಾ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಅವರು ಜಿಲ್ಲೆಗೆ ಬಂದಿದ್ದಾರೆ, ಮತ್ತೆ ಜೆಡಿಎಸ್‌ ಜೊತೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

'ಮಂಡ್ಯ ಜಿಲ್ಲೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಪದ್ಮನಾಭನಗರ ಕ್ಷೇತ್ರದಲ್ಲಿ ಅವರ ಗೆಲುವನ್ನು ಗಟ್ಟಿಮಾಡಿಕೊಳ್ಳುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯವಾಗಿದೆ. ಆ ಉದ್ದೇಶದಿಂದಲೇ ಒತ್ತಾಯಪೂರ್ವಕವಾಗಿ ಸ್ಥಾನ ಗಿಟ್ಟಿಸಿಕೊಂಡು ಬಂದಿದ್ದಾರೆ, ಅವರದ್ದು ಸ್ವಾರ್ಥ ರಾಜಕಾರಣ. ಅಶೋಕ್‌ ಅವರನ್ನು ಕೂಡಲೇ ಬದಲಾಯಿಸದಿದ್ದರೆ ಜಿಲ್ಲೆಯಲ್ಲಿ ಬಿಜೆಪಿ ಒಂದು ಸ್ಥಾನವೂ ಗೆಲ್ಲವುದಿಲ್ಲ' ಎಂದು ಯುವ ಬಿಜೆಪಿ ಕಾರ್ಯಕರ್ತ ಸುರೇಶ್‌ ಆತಂಕ ವ್ಯಕ್ತಪಡಿಸಿದರು.

ಅಮಿತ್‌ ಶಾ ಹೇಳಿಕೆಗೆ ಹರ್ಷ: ಈಚೆಗೆ ಮಂಡ್ಯಕ್ಕೆ ಬಂದಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಕರ್ನಾಟಕದಲ್ಲಿ ಯಾವ ಪಕ್ಷದ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು, ಹಲವು ವರಿಷ್ಠರು ಇದನ್ನೇ ಹೇಳಿದ್ದರು. ಇದರಿಂದ ಸ್ಥಳೀಯ ಕಾರ್ಯಕರ್ತರಲ್ಲೂ ಹೊಸ ವಿಶ್ವಾಸ ಮೂಡಿತ್ತು. ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಪ್ರಯತ್ನಗಳೂ ನಡೆಯುತ್ತಿದ್ದವು. ಇಂತಹ ಸಮಯದಲ್ಲಿ ಅಶೋಕ ಪ್ರವೇಶ ಉತ್ಸಾಹಕ್ಕೆ ತಣ್ಣೀರು ಎರಚಿದೆ.

'ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗುತ್ತಿದ್ದು ಮುಖಂಡರು, ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದೇವೆ. ಮೋದಿ, ಬೊಮ್ಮಾಯಿ ಸರ್ಕಾರದ ಸಾಧನೆಗಳನ್ನು ಮನೆಮನೆಗೂ ತಲುಪಿಸುತ್ತಿದ್ದೇವೆ. ಪಕ್ಷ ಸಂಘಟನೆಗೊಳ್ಳುತ್ತಿದ್ದು ಜೆಡಿಎಸ್‌- ಕಾಂಗ್ರೆಸ್‌ ಮುಖಂಡರಲ್ಲಿ ಭಯ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ದಿಢೀರ್‌ ಬದಲಾಯಿಸಿರುವುದು ಎಷ್ಟು ಸರಿ' ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಪ್ರಶ್ನಿಸಿದರು.

ಎತ್ತಿಕಟ್ಟುವ ಕೆಲಸ

'ನಾನು ಯಾವ ಹೊಂದಾಣಿಕೆಯನ್ನೂ ಮಾಡುವುದಿಲ್ಲ, ಅದು ನಮ್ಮ ಸಂಸ್ಕೃತಿಯೂ ಅಲ್ಲ. ನಾನು ಬಂದಿರುವುದು ಬೇರೆ ಪಕ್ಷದವರಿಗೆ ಭಯ ಹುಟ್ಟಿದ್ದು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ, ಅಪಪ್ರಚಾರ ನಡೆಸುತ್ತಿದ್ದಾರೆ. ನಮ್ಮ ಕಾರ್ಯಕರ್ತರನ್ನು ಜೊತೆಯಾಗಿ ಕರೆದೊಯ್ದು ಕೆಲಸ ಮಾಡುತ್ತೇನೆ' ಎಂದು ಸಚಿವ ಆರ್‌.ಅಶೋಕ್‌ ಪ್ರತಿಕ್ರಿಯಿಸಿದರು.

'ನಮ್ಮ ಪಕ್ಷದವರು ಯಾರೂ ಅತೃಪ್ತಿ ವ್ಯಕ್ತಪಡಿಸಿಲ್ಲ, ಎಲ್ಲರೂ ಖುಷಿ ಪಟ್ಟಿದ್ದಾರೆ. ನನ್ನ ಮೇಲೆ ಷಡ್ಯಂತ್ರ ರೂಪಿಸುವ ಧೈರ್ಯ ಯಾರಿಗೂ ಇಲ್ಲ. ನಾನು ಬಂದಾಗ 2 ಸಾವಿರಕ್ಕೂ ಹೆಚ್ಚು ಬೈಕ್‌ಗಲ್ಲಿ ರ‍್ಯಾಲಿ ಮೂಲಕ ದೇವಾಲಯಕ್ಕೆ ಕರೆದುಕೊಂಡು ಹೋದರು. ಅವರೇಕೆ ಅಪಪ್ರಚಾರ ಮಾಡುತ್ತಾರೆ? ಮಂಡ್ಯ ಜಿಲ್ಲೆಯಲ್ಲಿ ಈಗ ಬಿಜೆಪಿ ಶಕ್ತಿ ಬಂದಿದೆ' ಎಂದರು.