ಪರಿಷತ್ ಚುನಾವಣೆ: ನೆರವಿಗಾಗಿ ಜೆಡಿಎಸ್ ಅತೃಪ್ತ ನಾಯಕರ ಮನೆ ಕದ ತಟ್ಟುತ್ತಿರುವ ಬಿಜೆಪಿ -ಕಾಂಗ್ರೆಸ್!

ಪರಿಷತ್ ಚುನಾವಣೆ: ನೆರವಿಗಾಗಿ ಜೆಡಿಎಸ್ ಅತೃಪ್ತ ನಾಯಕರ ಮನೆ ಕದ ತಟ್ಟುತ್ತಿರುವ ಬಿಜೆಪಿ -ಕಾಂಗ್ರೆಸ್!

ಮೈಸೂರು: ಡಿಸೆಂಬರ್ 10 ರಂದು ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಗೆ ಮತದಾನ ನಡೆಯಲಿದೆ.

ಜೆಡಿಎಸ್ ಅತೃಪ್ತ ನಾಯಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಶಾಸಕ ಜಿಟಿ ದೇವೇಗೌಡ ಮತ್ತು ಎಂಎಲ್ ಸಿ ಸಂದೇಶ್ ನಾಗರಾಜ್ ಅವರ ಬೆಂಬಲ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ತುದಿಗಾಲಲ್ಲಿ ನಿಂತಿವೆ.

ಮೈಸೂರು ಮತ್ತು ಚಾಮರಾಜನಗರದ ಧಾರ್ಮಿಕ ಮುಖಂಡರನ್ನೂ ಕರೆಸಿ ಬೆಂಬಲ ಪಡೆಯುತ್ತಿದ್ದಾರೆ. ಬಿಜೆಪಿ ಆರ್.ರಘು ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಡಾ.ತಿಮ್ಮಯ್ಯ ಅವರನ್ನು ಕಣಕ್ಕಿಳಿಸಿದೆ. ಮೈಸೂರು-ಚಾಮರಾಜನಗರ ಭದ್ರಕೋಟೆ ಎಂದು ಪರಿಗಣಿಸಿರುವ ಜೆಡಿಎಸ್ ಮಂಜೇಗೌಡರನ್ನು ಅಭ್ಯರ್ಥಿಯನ್ನಾಗಿಸಿದೆ.

2018ರಲ್ಲಿ ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಶಾಸಕ ಜಿ.ಟಿ.ದೇವೇಗೌಡರನ್ನು ಮಂಜೇಗೌಡ ಭೇಟಿಯಾಗಿದ್ದಾರೆ. ಜಿಟಿಡಿ ಮತ್ತು ಜೆಡಿಎಸ್ ನಡುವೆ ಯಾವುದು ಸರಿಯಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಜಿಟಿ ದೇವೇಗೌಡ ಇನ್ನೂ ಜೆಡಿಎಸ್ ನಲ್ಲಿದ್ಜಾರೆ ಎಂದು ಇತ್ತಿಚೆಗೆ ಕುಮಾರಸ್ವಾಮಿ ಹೇಳಿದ್ದರು, ಆದರೆ ಅದಾದ ನಂತರ ಜಿಟಿಡಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡಿದ್ದರು.

ತಿಮ್ಮಯ್ಯ ಅವರ ಬೆಂಬಲಿಗರು ಸಂದೇಶ್ ನಾಗರಾಜ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ, ಅಭ್ಯರ್ಥಿಗಳು ಪ್ರತಿಸ್ಪರ್ಧಿ ಪಕ್ಷಗಳ ಎರಡನೇ ಪ್ರಾಶಸ್ತ್ಯದ ಮತಗಳ ಮೇಲೆ ಕಣ್ಣಿಟ್ಟಿದ್ದು, ಅದು ತಮಗೆ ಲಾಭ ನೀಡುತ್ತದೆ ಎಂದು ತಿಳಿದಿದ್ದಾರೆ.

ಡಿ ದೇವರಾಜ್ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ರಘು, ಈಗಾಗಲೇ ಜಿಲ್ಲಾ ಸಚಿವ ಎಸ್‌ಟಿ ಸೋಮಶೇಖರ್ ಮತ್ತು ಇತರರೊಂದಿಗೆ ಸಂದೇಶ್ ನಾಗರಾಜ್ ಅವರನ್ನು ಭೇಟಿ ಮಾಡಿದ್ದಾರೆ. ಜೆಡಿಎಸ್ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದ ನಾಗರಾಜ್ ಬಿಜೆಪಿ ಟಿಕೆಟ್ ಗಿಟ್ಟಿಸಲು ಶತಪ್ರಯತ್ನ ನಡೆಸಿದ್ದರು. ಆದರೆ, ಬಿಜೆಪಿ ರಘು ಅವರನ್ನು ಕಣಕ್ಕಿಳಿಸಿದೆ. ನಾಗರಾಜ್ ಅವರು ಎಂಎಲ್ಸಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ, ಜೊತೆಗೆ ತಮ್ಮ ಸಹೋದರ ಮತ್ತು ಪುತ್ರ ಇಬ್ಬರೂ ಬಿಜೆಪಿಯಲ್ಲಿರುವುದರಿಂದ ಬಿಜೆಪಿಗೆ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್‌ಗೆ ಸೇರ್ಪಡೆಗೊಂಡಿರುವ ಕಾಂಗ್ರೆಸ್‌ನ ಮಂಜೇಗೌಡ ಅವರು ತಮ್ಮ ಹಿಂದಿನ ಪಕ್ಷದಲ್ಲಿನ ಸಂಪರ್ಕ ಮತ್ತು ಕುಮಾರಸ್ವಾಮಿಯವರ ವರ್ಚಸ್ಸಿನ ಮೇಲೆ ಗೆಲ್ಲಲು ಮುಂದಾಗಿದ್ದಾರೆ. ಮಂಜೇಗೌಡ ಅವರು ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಒಕ್ಕಲಿಗ ಸಮುದಾಯದವರು ಇಲ್ಲಿ ಏಕೈಕ ಅಭ್ಯರ್ಥಿಯಾಗಿರುವುದರಿಂದ ಅವರ ಬೆನ್ನಿಗೆ ಒಕ್ಕಲಿಗ ಸಮುದಾಯವಿರುತ್ತದೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಂತಹ ಪ್ರಭಾವಿ ನಾಯಕರು ಪ್ರಚಾರದಲ್ಲಿ ಪಾಲ್ಗೊಳ್ಳುವುದರಿಂದ ಪರಿಸ್ಥಿತಿ ಬದಲಾಗಬಹುದು.