ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ಅಮ್ಮನ ಸೀರೆಯಲ್ಲಿ ಜೋಲಿ ಕಟ್ಟಿ ಆಟವಾಡಲು ಹೋದ ಬಾಲಕ ದುರಂತ ಅಂತ್ಯ! ಮಂಡ್ಯದಲ್ಲಿ ಮನಕಲಕುವ ಘಟನೆ

ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ಅಮ್ಮನ ಸೀರೆಯಲ್ಲಿ ಜೋಲಿ ಕಟ್ಟಿ ಆಟವಾಡಲು ಹೋದ ಬಾಲಕ ದುರಂತ ಅಂತ್ಯ! ಮಂಡ್ಯದಲ್ಲಿ ಮನಕಲಕುವ ಘಟನೆ

ಮಂಡ್ಯ: ಶಾಲೆ ಮುಗಿಸಿಕೊಂಡು ಮನೆಗೆ ಬಂದ 9 ವರ್ಷದ ಬಾಲಕನೊಬ್ಬ ಸೀರೆಯಲ್ಲಿ ಜೋಲಿ ಕಟ್ಟಿಕಂಡು ಖುಷಿಯಿಂದ ಆಟವಾಡಲು ಹೋಗಿ ದುರಂತ ಅಂತ್ಯಕಂಡ ಘಟನೆ ಕಿಕ್ಕೇರಿ ಸಮೀಪದ ಬೇವಿನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಸಂಭವಿಸಿದೆ.

ಬೇವಿನಹಳ್ಳಿ ಕೊಪ್ಪಲು ಗ್ರಾಮದ ಶ್ರೀನಿವಾಸ ಅವರ ಪುತ್ರ ಸಮರ್ಥ್​(9) ಮೃತ ಬಾಲಕ.

ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಸಮರ್ಥ್ ಬಂದಿದ್ದ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಜೋಕಾಲಿ ಆಟವಾಡಬೇಕು ಅನ್ನಿಸಿ, ಅಮ್ಮನ ಸೀರೆ ತೆಗೆದುಕೊಂಡು ಈತನೇ ಜೋಲಿ ಕಟ್ಟಿದ್ದಾನೆ. ಅದೇ ಇವನ ಪಾಲಿಗೆ ಉರುಳಾಗಿ ಪ್ರಾಣ ತೆಗೆದಿದೆ.

ಜೋಲಿ ಕಟ್ಟಿ ಅದರೊಳಗೆ ಕುಳಿತು ಆಟವಾಡಲು ಸಮರ್ಥ್​ ಹೋಗಿದ್ದಾನೆ. ಈ ವೇಳೆ ಜೋಲಿಯ ಬಟ್ಟೆ ಸುರುಳಿ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಬಾಲಕನಿಗೆ ಜೋಲಿಯಲ್ಲಿ ಆಡುವುದು ಎಂದರೆ ಬಲು ಖುಷಿ. ಯಾವುದೇ ಮನೆಗೆ ಹೋದರೂ ಜೋಲಿ ಕಟ್ಟಿಕೊಡಲು ಕೇಳಿ ಆಟವಾಡುವುದಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇಷ್ಟವಾದ ಜೋಲಿಯೇ ಬಾಲಕನ ಸಾವಿಗೆ ಮುಳುವಾಗಿದ್ದು ವಿಪರ್ಯಾಸ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.