ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಹರಿಹಾಯ್ದ ಬಿಜೆಪಿ ಮುಖಂಡರು

ಒಬ್ಬ ಸಾಮಾನ್ಯ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ, ಶಾಸಕರಾದ ಶರತ್ ಬಚ್ಚೇಗೌಡ ಹಾಗೂ ಕೃಷ್ಣ ಬೈರೇಗೌಡ ಅವರು, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೊಸಕೋಟೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನುಗೊಂಡನಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಮುಖಂಡರು, ಯಾರೇ ಆಗಲೀ ಅಧಿಕಾರಿಗಳು ತಪ್ಪು ಮಾಡಿದರೆ, ಅವರ ವಿರುದ್ಧ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಬಹುದು. ಅದನ್ನು ಬಿಟ್ಟು, ಶಾಸಕರಾದ ಶರತ್ ಬಚ್ಚೇಗೌಡ ಹಾಗೂ ಕೃಷ್ಣ ಬೈರೇಗೌಡರು ತಮ್ಮ ಬೆಂಬಲಿಗರೊಂದಿಗೆ, ಇತ್ತೀಚೆಗಷ್ಟೇ ಅನುಗೊಂಡನಹಳ್ಳಿ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂಗಮೇಶ್ ಮೇಟಿ ವಿರುದ್ಧ, ವಿನಾಕಾರಣ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ದಕ್ಷ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಅಷ್ಟೇ ಅಲ್ಲದೇ, ಪ್ರತಿಭಟನೆ ವೇಳೆ, ಬಿಜೆಪಿ ಕಾರ್ಯಕರ್ತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸುಳ್ಳು ಆರೋಪ ಮಾಡುವ ಮೂಲಕ ಸಚಿವ ಎಂ.ಟಿ.ಬಿ.ನಾಗರಾಜ್ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಕಿಡಿ ಕಾರಿದರು.