ಈ ಬಾರಿ ರಾಜ್ಯೋತ್ಸವ ಗಮ್ಮತ್ತು; ಕೋಟಿ ಜನರಿಂದ ಕನ್ನಡ ಹಾಡು

ಈ ಬಾರಿ ರಾಜ್ಯೋತ್ಸವ ಗಮ್ಮತ್ತು; ಕೋಟಿ ಜನರಿಂದ ಕನ್ನಡ ಹಾಡು

ಬೆಂಗಳೂರು, ಅ. 12: ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯ ಸರಕಾರ ಭರ್ಜರಿ ತಯಾರಿ ನಡೆಸಿದೆ. ನವೆಂಬರ್ 1ರಂದು ಇರುವ ರಾಜ್ಯೋತ್ಸವದ ಹಬ್ಬದ ಕಾರ್ಯಕ್ರಮಗಳು ಅಕ್ಟೋಬರ್ 28ರಿಂದ ಶುರುವಾಗಲಿವೆ ಎಂದು ಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಈ ಬಾರಿಯ 67ನೇ ಕನ್ನಡ ರಾಜ್ಯೋತ್ಸವದ ವಿಶೇಷತೆ ಎಂದರೆ ಒಂದು ಕೋಟಿ ಜನರು ಏಕಕಾಲದಲ್ಲಿ ಕನ್ನಡ ಹಾಡುಗಳನ್ನು ಹಾಡಲಿದ್ದಾರೆ.

"ಕಳೆದ ವರ್ಷದ ರಾಜ್ಯೋತ್ಸವದಂದು ಒಂದು ಲಕ್ಷ ಜನರು ಹಾಡಿದ್ದರು. ಈ ವರ್ಷ ಒಂದು ಕೋಟಿ ಜನರು ಹಾಡುತ್ತಾರೆ. ಕನ್ನಡ ನಾಡು ನುಡಿಯನ್ನು ಸಂಭ್ರಮಿಸಲು ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು" ಎಂದು ಸಚಿವ ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಹಾಡುಗಳನ್ನು ಹಾಡಲು ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. "ನನ್ನ ನಾಡು ನನ್ನ ಹಾಡು" ಹೆಸರಿನ ಈ ಕಾರ್ಯಕ್ರಮವು ರಾಜ್ಯಾದ್ಯಂತ 10 ಸಾವಿರ ಕಡೆ ನಡೆಯಲಿದೆ. ವಿದೇಶಗಳಲ್ಲೂ ಕಾರ್ಯಕ್ರಮಗಳು ನಡೆಯಲಿವೆ.

ನಾಡಗೀತೆ ಸೇರಿದಂತೆ

ರಾಜ್ಯಾದ್ಯಂತ ಪ್ರತಿಯೊಂದು ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬೀದಿ ಬೀದಿಗಳಲ್ಲಿ ಗಣೇಶೋತ್ಸವ ನಡೆವಂತೆ ಈ ಬಾರಿ ರಾಜ್ಯೋತ್ಸವದ ಗಮ್ಮತ್ತು ಇರಲಿದೆ.

ಮಾತಾಡು ಮಾತಾಡು ಕನ್ನಡ

ಕಳೆದ ವರ್ಷ 2021ರ ಕನ್ನಡ ರಾಜ್ಯೋತ್ಸವದಲ್ಲಿ "ಮಾತಾಡು ಮಾತಾಡು ಕನ್ನಡ" ಎಂಬ ಅಭಿಯಾನ ನಡೆದಿತ್ತು. ಪ್ರತಿಯೊಬ್ಬರೂ ಕೂಡ ಮನೆ ಮತ್ತು ಕಚೇರಿಗಳಲ್ಲಿ ಎಲ್ಲರ ಜೊತೆ ಕನ್ನಡದಲ್ಲಿ ಮಾತನಾಡುವಂತೆ ಪ್ರೇರೇಪಿಸಲಾಗಿತ್ತು. 14 ದೇಶಗಳಲ್ಲಿನ ಕನ್ನಡಿಗರು ಆ ಅಭಿಯಾನದಲ್ಲಿ ಪಾಲ್ಗೊಂಡಿದ್ದು ವಿಶೇಷ. ಅಲ್ಲದೇ ಕಳೆದ ವರ್ಷವೂ ವಿವಿಧ ಕಡೆ ಹಾಡುಗಳ ಕಾರ್ಯಕ್ರಮಗಳನ್ನು ಇಡಲಾಗಿತ್ತು. ಆಗ 1 ಲಕ್ಷ ಜನರು ಹಾಡುಗಳನ್ನು ಹಾಡಿದ್ದರು.

67ನೇ ರಾಜ್ಯೋತ್ಸವ

ಈಗಿರುವ ಕರ್ನಾಟಕದ ಪ್ರದೇಶಗಳು ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಆಳ್ವಿಕೆ ವೇಳೆ ಮದ್ರಾಸ್, ಮುಂಬೈ, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದವು. ಕನ್ನಡ ಭಾಷಿಕರ ಪ್ರದೇಶಗಳನ್ನು ಒಗ್ಗೂಡಿಸುವ ಕಾರ್ಯ 20ನೇ ಶತಮಾನದ ಆರಂಭದಿಂದಲೇ ನಡೆಯತೊಡಗಿತ್ತು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 1956 ನವೆಂಬರ್ 1ರಂದು ಭಾಷೆ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಣೆ ಮಾಡಲಾಯಿತು. ಆಗ ಮೈಸೂರು ರಾಜ್ಯದ ಉದಯವಾಯಿತು. 1973ರಲ್ಲಿ ಕರ್ನಾಟಕ ಹೆಸರು ಚಾಲನೆಗೆ ತರಲಾಯಿತು.

1956ರ ನವೆಂಬರ್ 1ರಂದು ರಾಜ್ಯವಾಗಿ ಉದಯವಾದ್ದರಿಂದ ಅಂದಿನಿಂದ ಪ್ರತೀ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈಗ 67ನೇ ರಾಜ್ಯೋತ್ಸವವಾಗಿದೆ.

ಹಲವು ಹಾಡುಗಳನ್ನು ಈ ಕಾರ್ಯಕ್ರಮದಲ್ಲಿ ಜನರು ಆಡಲಿದ್ದಾರೆ. ಸುಮಾರು ಒಂದು ಕೋಟಿಗೂ ಹೆಚ್ಚು ಮಂದಿ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಾಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.