ಬಳ್ಳಾರಿ ನಗರ: ಸೋಮಶೇಖರ ರೆಡ್ಡಿಗೆ ಲಕ್ಷ್ಮೀ ಅರುಣಾ ಸ್ಪರ್ಧೆ ಕಂಟಕ

ಬಳ್ಳಾರಿ ನಗರ: ಸೋಮಶೇಖರ ರೆಡ್ಡಿಗೆ ಲಕ್ಷ್ಮೀ ಅರುಣಾ ಸ್ಪರ್ಧೆ ಕಂಟಕ

ಳ್ಳಾರಿ: ಗಣಿ ನಗರಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಸಿಲಿನೊಂದಿಗೆ ಚುನಾವಣ ಕಾವು ಸಹ ಜೋರಾಗಿದೆ. ಕ್ಷೇತ್ರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ನಲ್ಲೇ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ.

ಕೆಆರ್‌ಪಿ ಅಭ್ಯರ್ಥಿ ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜಿ.ಸೋಮಶೇಖರ ರೆಡ್ಡಿ ಶಾಸಕರಾಗಿದ್ದಾರೆ. 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಇವರು, 2013ರಲ್ಲಿ ಸಹೋದರ ಜನಾರ್ದನ ರೆಡ್ಡಿ ಬಂಧನದಿಂದ ಚುನಾವಣೆಯಿಂದಲೇ ದೂರ ಉಳಿದಿದ್ದರು. 2018ರಲ್ಲಿ ಪುನಃ ಸ್ಪ ರ್ಧಿಸಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ 2023ರ ವಿಧಾನಸಭೆ ಚುನಾವಣೆಯಲ್ಲೂ ಪುನಃ ಸ್ಪ ರ್ಧಿಸುವುದಾಗಿ, ಪಕ್ಷದ ಟಿಕೆಟ್‌ ತಮಗೇ ಸಿಗಲಿದೆ ಎಂದು ಹೇಳಿಕೊಂಡಿದ್ದಾರೆ. ಒಂದು ವೇಳೆ ಪಕ್ಷದ ಟಿಕೆಟ್‌ ದೊರೆಯದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪುನಃ ಬಿಜೆಪಿ ಬೆಂಬಲಿಸುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಬಿಜೆಪಿಯಲ್ಲೂ ಜಿ.ಪಂ. ಮಾಜಿ ಉಪಾಧ್ಯಕ್ಷ ಕೆ.ಎ.ರಾಮಲಿಂಗಪ್ಪ ಹೊರತುಪಡಿಸಿ ಮತ್ಯಾರೂ ಆಕಾಂಕ್ಷಿ ಎಂದು ಹೇಳಿಕೊಂಡಿಲ್ಲ. ಇದು ಶಾಸಕ ಸೋಮಶೇಖರ ರೆಡ್ಡಿ ಬಿಜೆಪಿಯಿಂದ ಪುನಃ ಸ್ಪರ್ಧೆಗೆ ಲೈನ್‌ ಕ್ಲಿಯರ್‌’ ಮಾಡಿಕೊಟ್ಟಿದೆಯಾದರೂ ಸಹೋದರ ಜನಾರ್ದನ ರೆಡ್ಡಿ ತಮ್ಮ ನೂತನ ಕೆಆರ್‌ಪಿ ಪಕ್ಷದಿಂದ ಪತ್ನಿ ಲಕ್ಷೀ¾ ಅರುಣಾ ಅವರನ್ನು ಕಣಕ್ಕಿಳಿಸುತ್ತಿರುವುದು ಶಾಸಕ ಸೋಮಶೇಖರ ರೆಡ್ಡಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಈ ಬಾರಿ ಸಹೋದರರ ಮಧ್ಯೆ ಕುತೂಹಲದ ಸವಾಲ್‌ ಏರ್ಪಟ್ಟಿದೆ.

ಯಾರಿಗೆ “ಕೈ’ ಟಿಕೆಟ್‌: ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಈ ಬಾರಿ ಬೇಡಿಕೆ ಹೆಚ್ಚಾಗಿದೆ. 15ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಎನ್‌.ಸೂರ್ಯನಾರಾಯಣ ರೆಡ್ಡಿ ಪುತ್ರ ಜಿ.ಪಂ. ಮಾಜಿ ಸದಸ್ಯ ನಾರಾ ಭರತ್‌ರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಪುತ್ರ ಜಿ.ಪಂ. ಮಾಜಿ ಸದಸ್ಯ ಅಲ್ಲಂ ಪ್ರಶಾಂತ್‌, ಮಾಜಿ ಸಚಿವ ಮುಂಡೂÉರು ದಿವಾಕರ ಬಾಬು, ಜಿ.ಪಂ. ಮಾಜಿ ಅಧ್ಯಕ್ಷ, ಪಕ್ಷದ ಹಾಲಿ ಜಿಲ್ಲಾಧ್ಯಕ್ಷ ಜಿ.ಎಸ್‌.ಮಹ್ಮದ್‌ ರಫೀಕ್‌, ಮಾಜಿ ಶಾಸಕ ಅನಿಲ್‌ ಲಾಡ್‌, ಯುವ ಮುಖಂಡ ಸುನೀಲ್‌ ರಾವೂರು ಪ್ರಬಲ ಆಕಾಂಕ್ಷಿಗಳಾಗಿದ್ದು, ತೆರೆಮರೆಯ ಯತ್ನದಲ್ಲಿ ತೊಡಗಿದ್ದಾರೆ.

ಈ ಎಲ್ಲ ಘಟಾನುಘಟಿಗಳ ಪೈಪೋಟಿ ನಡುವೆ ಖ್ಯಾತ ವೈದ್ಯ ಡಾ| ಧರ್ಮರೆಡ್ಡಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿ ಕುತೂಹಲ ಮೂಡಿಸಿದ್ದಾರೆ. ಅಂತಿಮ “ಬೆಸ್ಟ್‌ ಆಫ್‌ ತ್ರಿ’ ಪಟ್ಟಿಯಲ್ಲಿ ಎಲ್ಲರೂ ತಮ್ಮ ಹೆಸರಿದೆ ಎಂದು ಹೇಳಿಕೊಳ್ಳುತ್ತಿದ್ದು, ಯಾರಿಗೆ ಟಿಕೆಟ್‌ ಎಂಬುದು ಸದ್ಯದ ಮಟ್ಟಿಗೆ ಸಸ್ಪೆನ್ಸ್‌ ಆಗಿದೆ. ಈ ನಡುವೆ ಅಲ್ಲಂ ವೀರಭದ್ರಪ್ಪ, ಶಾಮನೂರು ಶಿವಶಂಕರಪ್ಪ ಸೇರಿ ಕೆಲವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಪಕ್ಷದಲ್ಲಿ ಎಲ್ಲ ಆಕಾಂಕ್ಷಿಗಳು ರಾಜ್ಯ, ರಾಷ್ಟ್ರ ವರಿಷ್ಠರ ಕಚೇರಿ, ಮನೆಗಳಿಗೆ ಎಡತಾಕುತ್ತಿದ್ದು, ಅಂತಿಮವಾಗಿ “ಕೈ’ ಟಿಕೆಟ್‌ ಯಾರಿಗೆ ಎಂಬ ಕುತೂಹಲಕ್ಕೆ ನಾಮಪತ್ರ ಸಲ್ಲಿಕೆ ಬಳಿಕ ತೆರೆಬೀಳಲಿದೆ.

ಜೆಡಿಎಸ್‌ ಸದ್ಯ ಸೈಲೆಂಟ್‌: ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ನೂತನ ಕೆಆರ್‌ಪಿ ಪಕ್ಷಗಳಲ್ಲಿ ರಾಜಕೀಯ ಚುಟುವಟಿಕೆಗಳು ಬಿರುಸು ಪಡೆದುಕೊಂಡಿದ್ದರೂ, ಜೆಡಿಎಸ್‌ ಪಕ್ಷ ಮಾತ್ರ ಸದ್ಯ ಸೈಲೆಂಟ್‌ ಆಗಿದೆ. ಜಿಲ್ಲಾಧ್ಯಕ್ಷ ಪಿ.ಎಸ್‌. ಸೋಮಲಿಂಗನಗೌಡ ತಾವೂ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ ಹೊರತು, ಮತ್ಯಾರೂ ಟಿಕೆಟ್‌ಗೆ ಬಯಸಿದಂತೆ ಇಲ್ಲ. ಪಕ್ಷದಿಂದ ಯಾವುದೇ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿಲ್ಲ. ಹೀಗಾಗಿ ಕಾಂಗ್ರೆಸ್‌-ಬಿಜೆಪಿ ಮಧ್ಯೆ ನೇರ ಫೈಟ್‌ ಏರ್ಪಡಲಿದ್ದು ಜೆಡಿಎಸ್‌ ಮೌನ’ಕ್ಕೆ ಶರಣಾದಂತಿದೆ.

ಮತದಾರರನ್ನು ಸೆಳೆಯಲು ಉಡುಗೊರೆ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಸೋಮಶೇಖರ ರೆಡ್ಡಿ ಸಹಿತ ಆಕಾಂಕ್ಷಿಗಳು ಈಗಿನಿಂದಲೇ ಜನರ ಬಳಿಗೆ ಹೋಗುತ್ತಿದ್ದಾರೆ. ಶಾಸಕ ಜಿ.ಸೋಮಶೇಖರ ರೆಡ್ಡಿ ಸ್ಲಂ ನಿವಾಸಿಗಳಿಗೆ ಪಟ್ಟಾ ವಿತರಿಸಿದರೆ, ಕಾಂಗ್ರೆಸ್‌ ಆಕಾಂಕ್ಷಿ ನಾರಾ ಭರತ್‌ ರೆಡ್ಡಿ ಮನೆ ಮನೆಗೆ ಕುಕ್ಕರ್‌, ಬೀದಿ ವ್ಯಾಪಾರಿಗಳಿಗೆ ಛತ್ರಿ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಕಿಟ್‌ ವಿತರಿಸಿ ನೆರವಾಗಿದ್ದಾರೆ. ಕೆಆರ್‌ಪಿ ಅಭ್ಯರ್ಥಿ ಲಕ್ಷೀ¾ ಅರುಣಾ ಅವರು ಮನೆ ಮನೆಗೆ ಹೋಗಿ ಸೀರೆ, ಬೀದಿಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ನೀಡುವ ಮೂಲಕ ಮತದಾರರಿಗೆ ಈಗಿನಿಂದಲೇ ಗಾಳ ಹಾಕಲು ಮುಂದಾಗಿದ್ದಾರೆ.

-ವೆಂಕೋಬಿ ಸಂಗನಕಲ್ಲು