ಭಾಲ್ಕಿ| ಕಾಗೇರಿಗೆ ಅವಮಾನ; ಪ್ರತಿಭಟನೆ

ಭಾಲ್ಕಿ: ಶಾಸಕ ಈಶ್ವರ ಖಂಡ್ರೆ ಅವರ ಬೆಂಬಲಿಗರು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿಧಾನಸಭೆ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಅವಮಾನಿಸಿರುವ ಶಾಸಕ ಖಂಡ್ರೆ ಅವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಬೇಕು. ಶಾಸಕ ಈಶ್ವರ ಖಂಡ್ರೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ,'ಶಾಸಕ ಈಶ್ವರ ಖಂಡ್ರೆ ಅಧಿವೇಶನದಲ್ಲಿ ವಿಧಾನಸಭೆ ಅಧ್ಯಕ್ಷರ ಮಾತಿಗೆ ಗೌರವ ತೋರದೆ ಅತಿರೇಕದ ವರ್ತನೆ ತೋರುವ ಮೂಲಕ ಭಾಲ್ಕಿ ಜನತೆಯ ಮಾನ ಹರಾಜು ಹಾಕಿದ್ದಾರೆ. ಸ್ವಾರ್ಥಕ್ಕಾಗಿ ವೀರಶೈವ ಮಹಾಸಭೆ ದುರುಪಯೋಗ ಪಡಿಸಿಕೊಂಡಿದ್ದಾರೆ' ಎಂದು ದೂರಿದರು.
ರಾಜ್ಯ ಮಟ್ಟದಲ್ಲಿ ವೀರಶೈವ ಮಹಾಸಭೆ ಬಂದ್ ಮಾಡಬೇಕು. ಚುನಾವಣೆ ಸೇರಿದಂತೆ ಇತರ ಸಂದರ್ಭಗಳಲ್ಲಿ ವೀರಶೈವ ಮಹಾಸಭೆಯನ್ನು ಸ್ವಂತಕ್ಕಾಗಿ, ಕಾಂಗ್ರೆಸ್ ಪಕ್ಷಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಖಂಡ್ರೆ ಅವರ ಸ್ವಾರ್ಥ ನೀತಿಯ ವಿರುದ್ಧ ಯುವಕರು ಸಿಡಿದೇಳುತ್ತಾರೆ ಎಂದು ಎಚ್ಚರಿಸಿದರು.
ಸುಳ್ಳಿನ ಸರ್ದಾರ, ಶಾಸಕ ಖಂಡ್ರೆ ವಿಧಾನಸಭೆಯಲ್ಲಿ 3 ಲಕ್ಷ ಮತ ಪಡೆದಿದ್ದೇನೆ ಎಂದು ಹೇಳಿರುವುದು ಹಾಸ್ಯಾಸ್ಪದ. ಪಟ್ಟಣದ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಸಲು ಹೊರಟಿರುವುದನ್ನು ಸಹಿಸುವುದಿಲ್ಲ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಪ್ರಧಾನ ಕಾರ್ಯದರ್ಶಿ ಅರಿಹಂತ ಸಾವಳೆ, ಪ್ರಸನ್ನ ಖಂಡ್ರೆ, ಜನಾರ್ಧನರಾವ್ ಬಿರಾದಾ ರ ಮಾ ತನಾಡಿ,'ಶಾಸಕ ಖಂಡ್ರೆ ಅವರ ದುರಂಹಕಾರದ ವರ್ತನೆ ಹೆಚ್ಚು ದಿನ ನಡೆಯುವುದಿಲ್ಲ. ಮತದಾರರು ಮುಂ ಬರುವ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ತಕ್ಕಪಾಠ ಕಲಿಸಬೇಕು' ಎಂದು ಹೇಳಿದರು.