ಬೆಂಗಳೂರಿನಲ್ಲಿ ಮನೆ ಮಾಡಲಿದ್ದಾರೆ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್: ಅಶೋಕ

ಬಾಗಲಕೋಟೆ: ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಬೆಂಗಳೂರಿನಲ್ಲಿ ಮನೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಶನಿವಾರ ಕಲಾದಗಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರೂ ನಾಯಕರಿಗೆ ಮನೆ ಹುಡುಕುವ ಕಾರ್ಯ ಈಗಾಗಲೇ ನಡೆಸಲಾಗುತ್ತಿದೆ.
'ನಮ್ಮದು ನಾಳೆ ಬಾ ಎನ್ನುವ ಪಕ್ಷ ಅಲ್ಲ. ಸದಾ ಜನರೊಂದಿಗೆ ಇರುವ ಪಕ್ಷ. ಕಾಂಗ್ರೆಸ್ ನಾಯಕರ ತರಹ ಬಂದು, ಓಡಿ ಹೋಗಲ್ಲ. ಭಾಷಣ ಮಾಡಿ ಓಡಿ ಹೋಗುವುದಲ್ಲ. ಇಲ್ಲಿ ಇರಬೇಕು' ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಡಬಲ್ ಎಂಜಿನ್ ಸರ್ಕಾರ ಮುಂದುವರೆಯಲಿದೆ. ಬಿಜೆಪಿ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ, ಬಿಜೆಪಿ ಸರ್ಕಾರ ಬರುವುದು ಅಷ್ಟೇ ಸತ್ಯ ಎಂದರು.
ಒಪಿಎಸ್ ಜಾರಿಗೆ ಆಗ್ರಹಿಸಿ ಶಿಕ್ಷಕರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸುದ್ದಿಗಾರರು ಕೇಳಿದ ಪಶ್ನೆಗೆ, ಶಿಕ್ಷಣ ಇಲಾಖೆ ಸಚಿವರ ಜತೆಗೆ ಮಾತನಾಡುತ್ತೇನೆ. ಎಲ್ಲರಿಗೂ ನ್ಯಾಯ ಸಿಗುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.