ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯ ಅವಾಂತರ: ಜನ ತತ್ತರ

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯ ಅವಾಂತರ: ಜನ ತತ್ತರ

ಚಿತ್ರದುರ್ಗ: ಜಿಲ್ಲೆಯಲ್ಲಿ ಮನೆಯ ಗೋಡೆಗಳು ಕುಸಿದು ಸಾವು-ನೋವು ಸಂಭವಿಸುತ್ತಿದೆ. ರೈತರ ಜಮೀನಿಗೆ ನೀರು ನುಗ್ಗುತ್ತಿದೆ. ನೂರಾರು ಎಕರೆ ಬೆಳೆಗಳಿಗೆ ಹಾನಿ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿ ಜನರ ನಿದ್ದೆಗೆಡಿಸಿದೆ. ಮಳೆಯ ಅವಾಂತರಕ್ಕೆ ಜಿಲ್ಲೆಯ ಜನ ತತ್ತರಿಸಿದ್ದಾರೆ.

ಜಿಲ್ಲೆಯಲ್ಲಿ ಒಂದು ವಾರದಿಂದಲೂ ಮಳೆ ಮುಂದುವರಿದಿದೆ. ಗುರುವಾರ ರಾತ್ರಿಯಿಂದ ಜಿಟಿಜಿಟಿಯಾಗಿ ಆರಂಭವಾದ ಮಳೆ ಶುಕ್ರವಾರ ನಸುಕಿನಿಂದ ತುಸು ಬಿರುಸು ಪಡೆಯಿತು. ಸಂಜೆಯವರೆಗೂ ನಿರಂತರವಾಗಿ ಎಡೆಬಿಡದೆ ಸುರಿದಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿ ಉಂಟಾಗಿದೆ.

ರಾಗಿ, ಭತ್ತ, ಕಡಲೆ, ಶೇಂಗಾ, ಹೂವು, ಹಣ್ಣು ಇತರ ಬೆಳೆಗಳಿಗೆ ಹಾನಿ ಉಂಟಾಗಿದೆ. ಅಡಿಕೆ, ತೆಂಗು ಸೇರಿ ಇತರ ತೋಟಗಳಿಗೆ ನೀರು ನುಗ್ಗುತ್ತಲೇ ಇದೆ. ಕೆಲವೆಡೆ ಫಸಲಿಗೆ ಬಂದಿದ್ದ ಬಾಳೆ ಗಿಡಗಳು ಹಾನಿಯಾಗಿವೆ. ಬೆಳೆ ಹಾನಿಯಿಂದಾಗಿ ರೈತರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಹಲವು ಭಾಗಗಳಲ್ಲಿ ರಸ್ತೆ, ಜಮೀನುಗಳಿಗೆ ನೀರು ಹರಿಯಲಾರಂಭಿಸಿದೆ. ಇದು ರೈತರನ್ನು ಮತ್ತಷ್ಟು ಆತಂಕಕ್ಕೆ ನೂಕಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ವಡ್ಡು, ಬಾವಿಗಳಿಗೂ ನೀರು ಹರಿದಿದೆ. ಕೆಲವೆಡೆ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಕೋಡಿ ಬಿದ್ದಿದೆ. ಅಂತರ್ಜಲ ಮಟ್ಟ ತುಸು
ಹೆಚ್ಚಳವಾಗಿದೆ.

ಚಿತ್ರದುರ್ಗ ನಗರದ ಹಲವು ಮಾರ್ಗಗಳಲ್ಲಿ ನಿರ್ಮಾಣವಾಗಿರುವ ಕೆಳಸೇತುವೆ ಸೇರಿ ತಗ್ಗುಪ್ರದೇಶಗಳ ರಸ್ತೆಗಳ ಕೆಳಭಾಗ ಮಳೆಯಿಂದಾಗಿ ಜಲಾವೃತವಾಗಿವೆ. ಸವಾರರು ಪರದಾಡುವಂತಾಗಿದೆ. ಚರಂಡಿ ನೀರು ರಸ್ತೆಗಳ ಮೇಲೆಲ್ಲ ಹರಿದು ಕೊಳಚೆ ನೀರು ಸವಾರರಿಗೆ ಸಿಡಿಯುತ್ತಿದೆ.

ಜಿಲ್ಲೆಯ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 13ರ ಮಾರ್ಗದಲ್ಲೂ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

'ಹೊಸದುರ್ಗ ತಾಲ್ಲೂಕಿನ ಗೂಳಿಹಟ್ಟಿ ಕಡೆಯಿಂದ ದೇವಪುರ ಕಾಲೊನಿಗೆ ಹಿರೇಹಳ್ಳದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದಿದೆ. ಇದರಿಂದಾಗಿ ರಾಗಿ, ಜೋಳ, ಮೆಕ್ಕೆಜೋಳ ಸೇರಿ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ' ಎಂದು ದೇವಪುರ ರೈತ ಶಂಕರಮೂರ್ತಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 66,376 ಹೆಕ್ಟೇರ್‌ ಪ್ರದೇಶ ಬೆಳೆ ಹಾನಿಯಾಗಿದೆ. ಇದರಲ್ಲಿ ಮುಖ್ಯವಾಗಿ ರಾಗಿ, ಜೋಳ, ಮೆಕ್ಕೆಜೋಳ, ಶೇಂಗಾ, ಸಿರಿಧಾನ್ಯ ಹಾಗೂ ತೋಟಗಾರಿಕೆಯಲ್ಲಿ ಹೂವು ಮತ್ತು ಹಣ್ಣಿನ ಬೆಳೆಗಳಿಗೆ ಹಾನಿ ಉಂಟಾಗಿದೆ.

ಹೊಸದುರ್ಗದಲ್ಲಿ 65 ಮಿ.ಮೀ. ಮಳೆ

ಹೊಸದುರ್ಗದಲ್ಲಿ 65 ಮಿ.ಮೀ. ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ.

ಬಾಗೂರು 10 ಮಿ.ಮೀ., ಮತ್ತೋಡು 40, ಶ್ರೀರಾಂಪುರ 45, ಮಾಡದಕೆರೆ 21, ಹಿರಿಯೂರು 52, ಬಬ್ಬೂರು 39, ಇಕ್ಕನೂರು 43, ಈಶ್ವರಗೆರೆ 52, ಸೂಗೂರು 8, ಚಳ್ಳಕೆರೆ 18, ಪರಶುರಾಂಪುರ 22, ತಳಕು 39, ಡಿ.ಮರಿಕುಂಟೆ 41, ನಾಯಕನಹಟ್ಟಿ 40 ಮಿ.ಮೀ. ಮಳೆಯಾಗಿದೆ.

ಮೊಳಕಾಲ್ಮುರು 49 ಮಿ.ಮೀ., ರಾಯಾಪುರ 38, ಬಿ.ಜಿ.ಕೆರೆ 42, ರಾಂಪುರ 53, ದೇವಸಮುದ್ರ 45, ಹೊಳಲ್ಕೆರೆ 45, ರಾಮಗಿರಿ 18, ಚಿಕ್ಕಜಾಜೂರು 20, ಬಿ.ದುರ್ಗ 16, ಎಚ್.ಡಿ. ಪುರ 26, ತಾಳ್ಯ 15, ಚಿತ್ರದುರ್ಗ 28, ಹಿರೇಗುಂಟನೂರು 4, ಭರಮಸಾಗರ 18, ಸಿರಿಗೆರೆ 15, ತುರುವನೂರು 23 ಹಾಗೂ ಐನಹಳ್ಳಿಯಲ್ಲಿ 19.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

ಕಾಳಜಿ ಕೇಂದ್ರ ತೆರೆಯಲು ಆದೇಶ

ಹೊಸದುರ್ಗ, ಹಿರಿಯೂರು ಹಾಗೂ ಹೊಳಲ್ಕೆರೆ ಭಾಗದಲ್ಲಿ ಕೊಂಚ ಬಿರುಸಿನಿಂದ ಮಳೆಯಾಗಿದೆ.

ಶಿಥಿಲಗೊಂಡಿರುವ ಮನೆಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದ್ದಾರೆ. ಅಗತ್ಯ ಇರುವ ಕಡೆ ಕಾಳಜಿ ಕೇಂದ್ರ ತೆರೆಯುವಂತೆಯೂ ಆದೇಶಿಸಿದ್ದಾರೆ.