ನನ್ನ ಸಾವಿಗೆ ಪೊಲೀಸರೇ ಕಾರಣ ಎಂದು ಗೋಡೆ ಮೇಲೆ ರಕ್ತದಲ್ಲಿ ಬರೆದು ನೇಣಿಗೆ ಕೊರಳೊಡ್ಡಿದ!
ಚಿತ್ರದುರ್ಗ: ಹಿರಿಯೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಸೋಮವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ತನ್ನ ಕೈ ಕೊಯ್ದು ಗೊಂಡು, ರಕ್ತದಿಂದ ಗೋಡೆ ಮೇಲೆ 'ನನ್ನ ಸಾವಿಗೆ ಪೊಲೀಸರೇ ಕಾರಣ' ಎಂದು ಬರೆದಿದ್ದಾನೆ.
ಚಿತ್ರದುರ್ಗ ತಾಲೂಕು ಭೀಮಸಮುದ್ರ ಬಳಿಯ ಬೊಮ್ಮೇನಹಳ್ಳಿ ಗ್ರಾಮದ ವೆಂಕಟೇಶ್(42) ಮೃತ. ಹಿರಿಯೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದ ಅಂಗಡಿ ಮಳಿಗೆಯೊಂದರ ಮೇಲೆ ಪಂಚೆಯಿಂದ ನೇಣು ಬಿಗಿದುಕೊಂಡು ಸತ್ತಿದ್ದಾನೆ. ಗೋಡೆ ಬರಹ ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಜಿ.ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಡೆ ಮೇಲೆ 'ನನ್ನ ಸಾವಿಗೆ ಪೊಲೀಸರೇ ಕಾರಣ, ಮದುವೆ..' ಇತ್ಯಾದಿ ಅಸ್ಪಷ್ಟ ಬರಹಗಳಿದ್ದು, ತನಿಖೆಗೆ ಎಫ್ಎಸ್ಎಲ್ ವಿಧಿ ವಿಜ್ಞಾನ ತಜ್ಞರನ್ನು ಕೋರಲಾಗಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ಈತ ಏನಾದರೂ ದೂರು ಕೊಟ್ಟಿದ್ದಾನೆಯೇ ಎಂಬುದರ ಸಹಿತ ವಿವರವಾದ ತನಿಖೆಗೆ ಆದೇಶಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ