ಒಲಿಂಪಿಕ್ಸ್ ಚಿನ್ನ ಗೆಲ್ಲುವವರಿಗೆ ಉತ್ತರ ಪ್ರದೇಶ ಸರ್ಕಾರದಿಂದ ಭರ್ಜರಿ ನಗದು ಪುರಸ್ಕಾರ ಘೋಷಣೆ!

ಲಕ್ನೋ: ಜುಲೈ 23ರಿಂದ ಜಪಾನ್ ಟೋಕಿಯೋದಲ್ಲಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಹಬ್ಬ ಶುರುವಾಗಲಿದೆ. ಜಾಗತಿಕ ಮಟ್ಟದ ಈ ಅದ್ದೂರಿ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಉತ್ತರ ಪ್ರದೇಶ ರಾಜ್ಯದ ಅಥ್ಲೀಟ್ಗಳಿಗೆ ಅಲ್ಲಿನ ಸರ್ಕಾರ ಭರ್ಜರಿ ನಗದು ಪರುಸ್ಕಾರ ಘೋಷಿಸಿದೆ (ಚಿತ್ರದಲ್ಲಿ ಅನ್ನು ರಾಣಿ).
ಟೋಕಿಯೋ ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಬಂಗಾರದ ಪದಕ ಗೆಲ್ಲುವ ಉತ್ತರ ಪ್ರದೇಶದ ಕ್ರೀಡಾಪಟುಗಳಿಗೆ ಬರೋಬ್ಬರಿ 6 ಕೋಟಿ ರೂ. ನೀಡುವುದಾಗಿ ಯೋಗಿ ಆದಿತ್ಯನಾಥ ಸರ್ಕಾರ ಹೇಳಿದೆ. ಜುಲೈ 13ರಿಂದ ಆರಂಭಗೊಳ್ಳುವ ಟೋಕಿಯೋ ಒಲಿಂಪಿಕ್ಸ್ ಆಗಸ್ಟ್ 8ರಂದು ಕೊನೆಗೊಳ್ಳಲಿದೆ.
ಉತ್ತರ ಪ್ರದೇಶದಿಂದ ಒಟ್ಟು 8 ಮಂದಿ ಅಥ್ಲೀಟ್ಗಳು ಟೋಕಿಯೋ ಒಲಿಂಪಿಕ್ಸ್ಗಾಗಿ ಆಯ್ಕೆಯಾಗಿದ್ದಾರೆ. 5 ವಿಭಿನ್ನ ಸ್ಪರ್ಧೆಗಳಲ್ಲಿ ಈ ಎಂಟು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಆ 8 ಅಥ್ಲೀಟ್ಗಳೆಂದರೆ ಮೈರಾಜ್ ಅಹ್ಮದ್ ಖಾನ್ (ಸ್ಕೀತ್), ಸೌರಭ್ ಚೌಧರಿ (ಶೂಟಿಂಗ್), ಪ್ರಿಯಾಂಕಾ ಗೋಸ್ವಾಮಿ (ವಾಕಿಂಗ್), ಅನ್ನು ರಾಣಿ (ಜಾವೆಲಿನ್ ಥ್ರೋ), ಶಿವಪಾಲ್ ಸಿಂಗ್ (ಜಾವೆಲಿನ್ ಥ್ರೋ), ಸತೀಶ್ ಕುಮಾರ್ (ಬಾಕ್ಸಿಂಗ್), ಲಲಿತ್ ಕುಮಾರ್ ಉಪಾಧ್ಯಾಯ (ಹಾಕಿ), ಅರವಿಂದ್ ಸಿಂಗ್ (ರೋಯಿಂಗ್).
ಭಾರತದಿಂದ 18 ಕ್ರೀಡಾ ವಿಭಾಗಗಳಲ್ಲಿ ಒಟ್ಟು 126 ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ. ಯಾವುದೇ ಒಲಿಂಪಿಕ್ಸ್ ಗೆ ಹೋಲಿಸಿದರೆ ಭಾರತ ಕಳುಹಿಸುತ್ತಿರುವ ಅತಿದೊಡ್ಡ ಅಥ್ಲೀಟ್ಗಳ ತಂಡ ಇದಾಗಿದೆ. ಭಾರತ 18 ಕ್ರೀಡಾ ವಿಭಾಗಗಳಲ್ಲಿ ಒಟ್ಟು 69 ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು, ಹರ್ಯಾಣದಿಂದ ಅತೀ ಹೆಚ್ಚಿನ ಕ್ರೀಡಾಪಟುಗಳು ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದಾರೆ.