ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದ್ದು ಅಭಿಮಾನಿಗಳು ಈ ಸರಣಿಗಾಗಿ ಎದುರುನೋಡುತ್ತಿದ್ದಾರೆ. ಆಸ್ಟ್ರೇಲಿಯಾ ತಂಡ ಫೆಬ್ರವರಿ 1ರಂದು ಭಾರತಕ್ಕೆ ಆಗಮಿಸಲಿದ್ದು 9ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತದ ಖಾಯಂ ವಿಕೆಟ್ ಕೀಪರ್ ರಿಷಭ್ ಪಂತ್ ಆಡಲು ಅಲಭ್ಯವಾಗಿರುವ ಕಾರಣ ಟೀಮ್ ಇಂಡಿಯಾ ಪರವಾಗಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಯಾರು ಕಣಕ್ಕಿಳಿಯಬೇಕು ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿ ಉಳಿದುಕೊಂಡಿದೆ.
ಭಾರತ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಸ್ ಭರತ್ ಹಾಗೂ ಇಶಾನ್ ಕಿಶನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಇಬ್ಬರ ಪೈಕಿ ಕೆಎಲ್ ಭರತ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ಹೆಚ್ಚು ಸೂಕ್ತ ಎಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ.
ಭಾರತದ ಪಿಚ್‌ಗಳಲ್ಲಿ ವಿಕೆಟ್‌ಕೀಪರ್ ಆಗಿ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವರ ಬೌಲಿಂಗನ್ನು ಭರತ್ ನಿಭಾಯಿಸಬಲ್ಲರು ಹಾಗೂ ಬ್ಯಾಟಿಂಗ್‌ನಲ್ಲಿಯೂ ಪರಿಣಾಮಕಾರಿ ಎನಿಸಬಲ್ಲರು ಎಂದಿದ್ದಾರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ.
ಫೆಬ್ರವರಿ 9 ರಂದು ನಾಗ್ಪುರದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗೆ ಭಾರತದ ರೋಹಿತ್ ಶರ್ಮಾ ನೇತೃತ್ವದ ತಂಡದಲ್ಲಿ ಭರತ್ ಮತ್ತು ಇಶಾನ್ ವಿಕೆಟ್ ಕೀಪಿಂಗ್ ಆಯ್ಕೆಯಾಗಿದ್ದಾರೆ. ಟೀಮ್ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರು ಭೀಕರ ಕಾರು ಅಪಘಾತಕ್ಕೆ ಒಳಗಾದ ಬಳಿಕ ಚಿಕಿತ್ಸೆ ಪಡೆಯುತ್ತಿದ್ದು ದುರದೃಷ್ಟವಶಾತ್ ಕೆಲ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಿದೆ.
ಕೆಎಸ್ ಭರತ್ ಭಾರತ ಎ ತಂಡದ ಪರವಾಗಿ ಸ್ಥಿರವಾಗಿ ಆಡುತ್ತಿದ್ದು ಪ್ರಥಮ ದರ್ಜೆ ಪಂದ್ಯಗಳಲ್ಲಿ 47.95 ಸರಾಸರಿ ಹೊಂದಿದ್ದಾರೆ. ಅಲ್ಲದೆ ಟೆಸ್ಟ್ ತಂಡದಲ್ಲಿ ಪಂತ್ ಅವರ ಬ್ಯಾಕಪ್ ಆಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ ಯುವ ಆಟಗಾರ. ನವೆಂಬರ್ 2022ರಲ್ಲಿ ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ಮೊದಲ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ನಡೆಸಲು ಸಾಧ್ಯವಾಗಿದ್ದಾಗ ಭರತ್ ತಮ್ಮ ಕೀಪಿಂಗ್ ಸಾಮರ್ಥ್ಯದಿಂದ ಬೆರಗುಗೊಳಿಸಿದರು.
"ನಿಮಗೆ ಉತ್ತಮ ಕೀಪರ್ ಅಗತ್ಯವಿದ್ದರೆ ಕೆಎಸ್ ಭರತ್ ಮೊದಲ ಆಯ್ಕೆಯಾಗಿರುತ್ತಾರೆ. ಆದರೆ ನಮ್ಮಲ್ಲಿ ಅಗ್ರ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಇಲ್ಲ ಸ್ಫೋಟಕ ಎಡಗೈ ಬ್ಯಾಟರ್‌ನ ಅಗತ್ಯವಿದೆ ಎನಿಸಿದರೆ ಆಗ ನಾವು ಹೇಳಬಹುದು ಇಶಾನ್ ಕಿಶನ್ ಅವರನ್ನು ಆಯ್ಕೆಯಾಗಿ ಪರಿಗಣಿಸಬಹುದು. ವೈಯಕ್ತಿಕವಾಗಿ ನನ್ನ ಆದ್ಯತೆ ಕೆಎಸ್ ಭರತ್ ಆಗಿರುತ್ತದೆ. ಯಾಕೆಂದರೆ ಅವರು ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನಲ್ಲಿಯೂ ಮಿಂಚಬಲ್ಲರು ಹಾಗೂ ರವಿಚಂದ್ರನ್ ಅಶ್ವಿನ್ ಮತ್ತು ಜಡೇಜಾ ಅವರ ಬೌಲಿಂಗ್‌ಗೆ ವಿಕೆಟ್‌ನ ಹಿಂದೆ ಸಮರ್ಥವಾಗಿ ಕೀಪಿಂಗ್ ಕೂಡ ನಡೆಸಬಲ್ಲರು" ಎಂದಿದ್ದಾರೆ ಆಕಾಶ್ ಚೋಪ್ರ.