ಬಿಸಿಸಿಐ ವಾರ್ಷಿಕ ಒಪ್ಪಂದ ಪಡೆದ ಆಟಗಾರರ ವಿವರ: ಸಂಜು ಸ್ಯಾಮ್ಸನ್‌, ಶಿಖರ್ ಧವನ್‌ಗೆ ಶುಭಸುದ್ದಿ

ಬಿಸಿಸಿಐ ವಾರ್ಷಿಕ ಒಪ್ಪಂದ ಪಡೆದ ಆಟಗಾರರ ವಿವರ: ಸಂಜು ಸ್ಯಾಮ್ಸನ್‌, ಶಿಖರ್ ಧವನ್‌ಗೆ ಶುಭಸುದ್ದಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಒಪ್ಪಂದ ಪಡೆದ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಅಚ್ಚರಿ ಎನ್ನುವಂತೆ ಈ ಬಾರಿ ಸಂಜು ಸ್ಯಾಮ್ಸನ್ ಮತ್ತು ಶಿಖರ್ ಧವನ್ ಅವರಿಗೆ ಸಿ ಗ್ರೇಡ್ ಗುತ್ತಿಗೆಯನ್ನು ನೀಡಲಾಗಿದೆ. ಈ ಮೂಲಕ ಸಂಜು ಸ್ಯಾಮ್ಸನ್ ಮತ್ತು ಧವನ್ ಏಕದಿನ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಸಿಕ್ಕಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2023 ಆರಂಭಕ್ಕೆ ಮುಂಚಿತವಾಗಿಯೇ ಸಂಜು ಸ್ಯಾಮ್ಸನ್ ಮತ್ತು ಶಿಖರ್ ಧವನ್ ಶುಭ ಸುದ್ದಿ ಪಡೆದುಕೊಂಡಿದ್ದಾರೆ. ಇವರಿಬ್ಬರೂ ಈ ಮೊದಲು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಯಾವ ಅವಕಾಶವೂ ಇರಲಿಲ್ಲ. ಆದರೆ, ಟೀಂ ಇಂಡಿಯಾ ಆಟಗಾರರ ಗಾಯದ ಸಮಸ್ಯೆಯಿಂದಾಗಿ ಬಿಸಿಸಿಐ ತನ್ನ ಯೋಜನೆಯನ್ನು ಬದಲಾಯಿಸಿಕೊಂಡಿದೆ.

ರಿಷಬ್ ಪಂತ್ ಪಂದ್ಯಾವಳಿಯಿಂದ ಹೊರಗುಳಿದಿದ್ದು, ಶ್ರೇಯಸ್ ಅಯ್ಯರ್ ಕೂಡ ವಿಶ್ವಕಪ್‌ವರೆಗೆ ಕ್ರಿಕೆಟ್ ಆಡುವುದು ಅನುಮಾನವಾಗಿದೆ. ಸೂರ್ಯಕುಮರ್ ಯಾದವ್ ಕೂಡ ಏಕದಿನ ಮಾದರಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವಿಫಲವಾಗಿರುವುದು, ಸಂಜು ಸ್ಯಾಮ್ಸನ್‌ಗೆ ಲಾಭವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಮುಂಜಾಗ್ರತಾ ಕ್ರಮವಾಗಿ ಸ್ಯಾಮ್ಸನ್‌ರನ್ನು ಪರಿಗಣಿಸಲಾಗಿದೆ.

ಬಿ ಗ್ರೇಡ್‌ಗೆ ಇಳಿದ ಕೆಎಲ್ ರಾಹುಲ್

ಕಳೆದ ವರ್ಷದಲ್ಲಿ ಎ ಗ್ರೇಡ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದ ಕೆಎಲ್ ರಾಹುಲ್ ತಮ್ಮ ಕಳಪೆ ಪ್ರದರ್ಶನದಿಂದಾಗಿ ಈ ಬಾರಿ ಬಿ ಗ್ರೇಡ್‌ ಒಪ್ಪಂದಕ್ಕೆ ಕುಸಿತ ಕಂಡಿದ್ದಾರೆ. ಏಕದಿನ ಮಾದರಿಯಲ್ಲಿ ಸದ್ಯ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಅವರು 4-5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಸ್ಥಾನವನ್ನು ಕಂಡುಕೊಂಡಿದ್ದಾರೆ. ರಾಹುಲ್ ಸತತವಾಗಿ ಕಳಪೆ ಪ್ರದರ್ಶನ ನೀಡಿದರೂ ಸಂಜು ಸ್ಯಾಮ್ಸನ್ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಸದ್ಯ ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಗಾಯಗೊಂಡ ನಂತರ ಯಾವುದೇ ಪಂದ್ಯಗಳಲ್ಲಿ ಆಡಲು ಸ್ಥಾನ ಪಡೆದುಕೊಂಡಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರೆ, ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು.

37 ವರ್ಷದ ಶಿಖರ್ ಧವನ್ ಕೂಡ ಸಿ ಗ್ರೇಡ್‌ನಲ್ಲಿ ಒಪ್ಪಂದ ಪಡೆದುಕೊಂಡಿದ್ದಾರೆ. 2023ರಲ್ಲಿ ಭಾರತ ತಂಡಕ್ಕಾಗಿ ಒಂದೂ ಪಂದ್ಯವನ್ನು ಆಡದಿದ್ದರೂ, ಐಪಿಎಲ್‌ನಲ್ಲಿ ಅವರ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. 18 ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಕಪ್ ಪಂದ್ಯಗಳಲ್ಲಿ ಐದು ಶತಕಗಳೊಂದಿಗೆ 65 ಸರಾಸರಿ ಹೊಂದಿದ್ದಾರೆ.

ಅತ್ಯುತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಎ ಪ್ಲಸ್ ಒಪ್ಪಂದಕ್ಕೆ ಬಡ್ತಿ ಪಡೆದಿದ್ದಾರೆ. ಅಚ್ಚರಿ ಎನ್ನುವಂತೆ ಈ ವರ್ಷ ಕ್ರಿಕೆಟ್ ಆಡುವುದು ಅನುಮಾನವಾಗಿದ್ದರೂ, ಬುಮ್ರಾ ಕೂಡ 7 ಕೋಟಿ ಪಡೆಯಲಿದ್ದಾರೆ.

ಬಿಸಿಸಿಐ ಒಪ್ಪಂದ ಪಡೆದ ಆಟಗಾರರು

ಎ ಪ್ಲಸ್ ಗ್ರೇಡ್ ಒಪ್ಪಂದ ಒಪ್ಪಂದ (7 ಕೋಟಿ ರುಪಾಯಿ): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ

ಎ ಗ್ರೇಡ್ ಒಪ್ಪಂದ (5 ಕೋಟಿ ರುಪಾಯಿ): ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್. ಶಮಿ, ರಿಷಬ್ ಪಂತ್, ಅಕ್ಷರ್ ಪಟೇಲ್

ಬಿ ಗ್ರೇಡ್‌ ಒಪ್ಪಂದ (3 ಕೋಟಿ ರುಪಾಯಿ): ಚೇತೇಶ್ವರ ಪೂಜಾರ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್. ಸಿರಾಜ್, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್.

ಸಿ ಗ್ರೇಡ್ ಒಪ್ಪಂದ (1 ಕೋಟಿ): ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡಾ, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್.