ಜಿಂಬಾಬ್ವೆ ತಂಡದಲ್ಲಿ ಸ್ಥಾನ ಪಡೆದ ಮಾಜಿ ಇಂಗ್ಲೆಂಡ್ ಆಟಗಾರ ಗ್ಯಾರಿ ಬ್ಯಾಲೆನ್ಸ್

ಐರ್ಲೆಂಡ್ ತಂಡದ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಜಿಂಬಾಬ್ವೆ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಗ್ಯಾರಿ ಬ್ಯಾಲೆನ್ಸ್ ಸ್ಥಾನ ಪಡೆದುಕೊಂಡಿದ್ದಾರೆ. ಜನವರಿ 12ರಿಂದ 15ರವರೆಗೆ ಹರಾರೆಯಲ್ಲಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಈ ಪಂದ್ಯಗಳು ನಡೆಯಲಿದೆ.
ಬ್ಯಾಲೆನ್ಸ್ 2006ರಲ್ಲಿ ನಡೆದ ಅಂಡರ್ 19 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಪರವಾಗಿಯೇ ಆಡಿದ್ದರು. ಆದರೆ ಅದಾದ ಬಳಿಕ ಇಂಗ್ಲೆಂಡ್ ತಂಡದ ಪರವಾಗಿ 39 ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್ ಪರವಾಗಿ 23 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಬ್ಯಾಲೆನ್ಸ್. ಆದರೆ ಜುಲೈ 2017 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ನಾಟಿಂಗ್ಹ್ಯಾಮ್ ಟೆಸ್ಟ್ ನಂತರ, ಬ್ಯಾಲೆನ್ಸ್‌ಗೆ ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಅವಕಾಶ ದೊರೆಯಲಿಲ್ಲ. ಹೀಗಾಗಿ ಮತ್ತೆ ಜಿಂಬಾಬ್ವೆ ರಾಷ್ಟ್ರೀಯ ತಂಡದ ಪರವಾಗಿ ಆಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
33 ವರ್ಷದ ಬ್ಯಾಲೆನ್ಸ್ ಜಿಂಬಾಬ್ವೆ ಕ್ರಿಕೆಟ್‌ನೊಂದಿಗೆ ಅಂತರರಾಷ್ಟ್ರೀಯ ಮತ್ತು ದೇಶೀಯ ಮಟ್ಟದಲ್ಲಿ ಆಡಲು ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ""ಜಿಂಬಾಬ್ವೆ ಕ್ರಿಕೆಟ್‌ಗೆ ಸೇರಲು ನಾನು ಉತ್ಸುಕನಾಗಿದ್ದೇನೆ. ಕೆಲವು ಶ್ರೇಷ್ಠ ತರಬೇತುದಾರರು ಮತ್ತು ಪ್ರತಿಭಾವಂತ ಆಟಗಾರರೊಂದಿಗೆ ಆಡುವುದನ್ನು ನಾನು ಎದುರಿನೋಡುತ್ತಿದ್ದೇನೆ" ಎಂದು ಬ್ಯಾಲೆನ್ಸ್ ಈ ಹಿಂದೆ ಹೇಳಿದ್ದರು.
ಈ ಮಧ್ಯೆ, ಸಿಕಂದರ್ ರಜಾ, ಮಿಲ್ಟನ್ ಶುಂಬಾ ಮತ್ತು ರೆಗಿಸ್ ಚಕಬ್ವಾ ಐರ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ (ಬಿಪಿಎಲ್) ಭಾಗವಹಿಸುವ ಹಿನ್ನೆಲೆಯಲ್ಲಿ ರಾಜಾ ಸದ್ಯ ಬಾಂಗ್ಲಾದೇಶದಲ್ಲಿದ್ದಾರೆ.
ಜಿಂಬಾಬ್ವೆ ಸ್ಕ್ವಾಡ್ ಹೀಗಿದೆ: ಕ್ರೇಗ್ ಎರ್ವಿನ್ (ನಾಯಕ), ಗ್ಯಾರಿ ಬ್ಯಾಲೆನ್ಸ್, ರಿಯಾನ್ ಬರ್ಲ್, ಟೆಂಡೈ ಚಟಾರಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ಇನೋಸೆಂಟ್ ಕೈಯಾ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ವೆಲ್ಲಿಂಗ್ಟನ್ ಮಸಕಡ್ಜಾ, ಟೋನಿ ಮುನ್ಯೊಂಗಾ, ರಿಚರ್ಡ್ ನಾಗರವಾ, ವಿಕ್ಟರ್ ನ್ಯುಚಿ, ಸೀನ್ ವಿಲಿಯಮ್ಸ್