ಗ್ರಾಮ ಪಂಚಾಯಿತಿಗಳ ಚುನಾವಣೆಗೆ ನಾಳೆ ಅಧಿಸೂಚನೆ

ಬೆಂಗಳೂರು, ಡಿ.12- ರಾಜ್ಯದ 27 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ನಾಳೆ ಅಧಿಸೂಚನೆ ಹೊರಡಿಸಲಾಗುತ್ತದೆ.ಅಧಿವ ಮುಕ್ತಾಯವಾಗಿರುವ 44 ಗ್ರಾಪಂ ಹಾಗೂ ವಿವಿಧ ಕಾರಣಗಳಿಂದ ಚುನಾವಣೆ ನಡೆಯದೆ ಇದ್ದ 13 ಗ್ರಾಪಂಗಳು ಸೇರಿದಂತೆ 57 ಗ್ರಾಪಂಗಳ ಸಾರ್ವತ್ರಿಕ ಚುನಾವಣೆಗೆ ನಾಳೆ ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ.
ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು, ನಾಮಪತ್ರ ಸಲ್ಲಿಸಲು ಡಿ.17 ಕೊನೆಯ ದಿನ. ಡಿ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಡಿ.20ರ ವರೆಗೆ ಕಾಲಾವಕಾಶವಿದೆ.
ಡಿ.27ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಅಗತ್ಯಬಿದ್ದರೆ ಮರು ಮತದಾನ ಡಿ.29ರಂದು ನಡೆಸಲಾಗುತ್ತದೆ. ಮತ ಎಣಿಕೆಯು ಡಿ.30ರಂದು ಬೆಳಗ್ಗೆ 8 ರಿಂದ ಆರಂಭವಾಗಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.
5 ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳ 1185 ವಾರ್ಡ್‍ಗಳಿಗೆ ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಡಿ.8ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಡಿ.15ರಂದು ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದೆ. ನಗರ ಸ್ಥಳೀಯ ಸಂಸ್ಥೆಗಳಿಗೂ ಡಿ.27ರಂದೇ ಮತದಾನ ನಡೆಯಲಿದ್ದು, ಡಿ.30ರಂದು ಮತ ಎಣಿಕೆ ನಡೆಯಲಿದೆ.