ಬೆಂಗಳೂರು ಸಂಚಾರ‌ ವ್ಯವಸ್ಥೆಯಲ್ಲಿ ಅಚ್ಚರಿ ಫಲಿತಾಂಶ: ಕಡಿಮೆಯಾಗೋದೆ ಇಲ್ಲ ಅಂದುಕೊಂಡಿದ್ದ ಟ್ರಾಫಿಕ್ ಈಗ ಸರಳ

ಬೆಂಗಳೂರು ಸಂಚಾರ‌ ವ್ಯವಸ್ಥೆಯಲ್ಲಿ ಅಚ್ಚರಿ ಫಲಿತಾಂಶ: ಕಡಿಮೆಯಾಗೋದೆ ಇಲ್ಲ ಅಂದುಕೊಂಡಿದ್ದ ಟ್ರಾಫಿಕ್ ಈಗ ಸರಳ

ಬೆಂಗಳೂರು: ಸಿಲಿಕಾನ್ ಸಿಟಿಗೆ ಮೂಲಭೂತ ಸಮಸ್ಯೆ ಆಗಿರುವ ಟ್ರಾಫಿಕ್ ಜಾಮ್ ನಿವಾರಿಸಲು ನಗರ ಸಂಚಾರ ವಿಭಾಗಕ್ಕೆ ಎಡಿಜಿಪಿ ದರ್ಜೆಯ ವಿಶೇಷ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಿ, ಐಪಿಎಸ್​ ಅಧಿಕಾರಿ ಡಾ. ಎಂ.ಎ.ಸಲೀಂ ಅವರನ್ನು ನೇಮಿಸಿದ ಬಳಿಕ ಬೆಂಗಳೂರು ಸಂಚಾರ‌ ವವ್ಯಸ್ಥೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ.

ಕಡಿಮೆ ಆಗೋದೆ ಇಲ್ಲ ಎಂದುಕೊಂಡಿದ್ದ ಟ್ರಾಫಿಕ್ ಈಗ ರಾಜ್ಯ ರಾಜಧಾನಿಯಲ್ಲಿ ತುಂಬಾ ಸರಳವಾಗಿದೆ. ನಗರದಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ಮೋದಿ ಕೂಡ ಸೂಚಿಸಿದ್ದರು. ಇದೀಗ ವಿಶೇಷ ಆಯುಕ್ತರ ನೇಮಕ ಬಳಿಕ, ಕೊಂಚ ಮಟ್ಟಿಗೆ ಟ್ರಾಫಿಕ್​ನಿಂದ ಮುಕ್ತಿ ಸಿಕ್ಕಿದಂತಾಗಿದೆ.

ಅಂದಹಾಗೆ ಡಾ. ಎಂ.ಎ ಸಲೀಂ ಜಾರಿಗೆ ತಂದ ಮೂರು ಸೂತ್ರದಿಂದ ನಗರದಲ್ಲಿ ಟ್ರಾಫಿಕ್ ಕಡಿಮೆಯಾಗಿದೆ. ಆದರೆ, ಮೂರು ಸೂತ್ರಗಳು ಯಾವುವೆಂದರೆ, ಮೊದಲನೆಯದು ಸರಕು ವಾಹನಗಳು ನಿರ್ಬಂಧ. ಬೆಳಗ್ಗೆ ಎಂಟರಿಂದ ಹನ್ನೊಂದು ಹಾಗೂ ಸಂಜೆ ಐದರಿಂದ ಎಂಟರವರೆಗೆ ಸರಕು ವಾಹನಳಿಗೆ ನಗರಕ್ಕೆ ನಿರ್ಬಂಧಿಸಲಾಗಿದೆ.

ಎರಡನೆಯದು ಸಿಗ್ನಲ್ ಸಿಂಕ್ರೋನೈಜ್. ಒಂದು ಸಿಗ್ನಲ್ ಓಪನ್ ಆದ್ರೆ ಆದರ ಮುಂದಿನ ಸಿಗ್ನಲ್ ಕೂಡ ಓಪನ್ ಆಗಲಿದೆ. ಮೂರನೆಯದು ಬೆಳಗ್ಗೆಯೇ ಫೀಲ್ಡ್​ಗೆ ಇಳಿಯುವ ಸಂಚಾರಿ ಪೊಲೀಸರು. ಸಂಚಾರಿ ಪೊಲೀಸ್​ ಅಧಿಕಾರಿಗಳು ಬೆಳಗ್ಗೆ ಎಂಟಕ್ಕೆ ಮೊದಲೇ ರಸ್ತೆಗೆ ಇಳಿದು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ನಗರದಲ್ಲಿ ಟ್ರಾಫಿಕ್ ಸದ್ಯ ಕಡಿಮೆಯಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಸಂಚಾರಿ ವಿಭಾಗದ ವಿಶೇಷ ಆಯುಕ್ತರಾದ ಡಾ.ಎಂ.ಎ ಸಲೀಂ, ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯದ್ದೇ ಹೆಚ್ಚು ಸಮಸ್ಯೆ. ಕಾಮಗಾರಿ ಕೆಲಸಗಳಿಂದಲೂ ತೊಡಕಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಇದನ್ನು ಸುಧಾರಿಸುವುದಕ್ಕೆ ನಮ್ಮ ಸಂಚಾರಿ ಇಲಾಖೆ ಮುಂದಾಗಿದ್ದು, ಒಳ್ಳೆಯ ಸ್ಪಂದನೆ ಸಹ ದೊರೆಯುತ್ತಿದೆ ಎಂದರು.

ಪೀಕ್ ಹವರ್​ನಲ್ಲೇ ಹಿರಿಯ ಅಧಿಕಾರಿಗಳು ಫೀಲ್ಡ್​ನಲ್ಲಿರಬೇಕೆಂದು ಸೂಚಿಸಿದ್ದು, ಅದೇ ರೀತಿ ಕೆಲಸ ಮಾಡಲಾಗುತ್ತಿದೆ. ಒಂದೇ ರಸ್ತೆಯಲ್ಲಿ ಮೂರ್ನಾಲ್ಕು ಸಿಗ್ನಲ್ ಇದ್ರೆ, ಅದನ್ನು ಒಂದೇ ಬಾರಿಗೆ ಓಪನ್ ಕ್ಲೋಸ್ ಮಾಡುತ್ತಿದ್ದೇವೆ. ಸಂಚಾರ ದಟ್ಟನೆ ತೀವ್ರವಾಗಿರುವ ಹೆಬ್ಬಾಳ ಫ್ಲೈಓವರ್​ನಲ್ಲೂ ಸುಧಾರಣೆ ಕಾಣುತ್ತಿದೆ. ನಾಯಂಡಹಳ್ಳಿಯಿಂದ ಮೈಸೂರು ರಸ್ತೆಯಲ್ಲೂ ಸಹ ವಾಹನಗಳು ವೇಗವಾಗಿ ಸಾಗುತ್ತಿವೆ. ಮಾರತ್ ಹಳ್ಳಿ ರಿಂಗ್ ರೋಡ್, ವೈಟ್ ಫೀಲ್ಡ್ ಸೇರಿದಂತೆ ಕೆಲ ಭಾಗಗಳಲ್ಲಿ ಸಮಸ್ಯೆಗಳು ಇನ್ನೂ ಇವೆ. ಸಿಟಿ ಮಾರ್ಕೆಟ್​ನಲ್ಲಿ ಪಾದಚಾರಿ ಸಮಸ್ಯೆ ಇತ್ತು, ಅದನ್ನ ಕಾರ್ಯರೂಪಕ್ಕೆ ಬರಲು ಹೆಚ್ಚುವರಿ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕೆ.ಆರ್ ಮಾರ್ಕೆಟ್​ನಲ್ಲಿ ಸಂಚಾರ ದಟ್ಟಣೆ ಸುಧಾರಣೆ ಕಂಡಿದೆ ಎಂದು ಸಲೀಂ ಹೇಳಿದರು. (ದಿಗ್ವಿಜಯ ನ್ಯೂಸ್​)