ತ್ರಿವೇಣಿ ಸಂಗಮದಲ್ಲಿ ಅ.13ರಿಂದ ದಕ್ಷಿಣ ಭಾರತದ ಮಹಾ ಕುಂಭಮೇಳ
ಬೆಂಗಳೂರು: ದಕ್ಷಿಣ ಭಾರತದ ಮಹಾ ಕುಂಭಮೇಳವು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮ ಅಂಬಿಗರಹಳ್ಳಿ-ಸಂಗಾಪುರ-ಪುರದಲ್ಲಿ ಅ.13ರಿಂದ 16ರವರೆಗೆ ನಡೆಯಲಿದೆ.
ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳು ನೈಸರ್ಗಿಕವಾಗಿ ಸಂಗಮ, ಮಲೆ ಮಹದೇಶ್ವರರು ಶ್ರೀಶೈಲದಿಂದ ಬಂದು ಮೊದಲು ಪಾದ ಸ್ಪರ್ಶ ಮಾಡಿದ ಸ್ಥಳದಲ್ಲಿ ಪುಣ್ಯಸ್ನಾನ, ಕುಂಭಮೇಳ ಒಂಬತ್ತು ವರ್ಷಗಳ ನಂತರ ಏರ್ಪಡಿಸಲಾಗುತ್ತಿದ್ದು, ಆರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಈ ಕುರಿತು ಮಾಹಿತಿ ನೀಡಿದ ಸಚಿವರಾದ ಕೆ.ಸಿ.ನಾರಾಯಣ ಗೌಡ ಮತ್ತು ಕೆ.ಗೋಪಾಲಯ್ಯ, ಅಗತ್ಯ ಸವಲತ್ತು, ದರ್ಶನ, ಪ್ರಸಾದ, ವಾಹನಗಳ ವ್ಯವಸ್ಥೆ ಜತೆಗೆ ಬಿಗಿ ಕ್ರಮವಹಿಸಲಾಗಿದೆ. ಆದಿಚುಂಚನಗಿರಿ, ಸುತ್ತೂರು ಹಾಗೂ ಕಾಗಿನೆಲೆ ಪೀಠಾಧ್ಯಕ್ಷರ ಸಾನ್ನಿಧ್ಯದಲ್ಲಿ 30 ಸಾಧು-ಸಂತರು ಭಾಗವಹಿಸುವರು. ಅ.14ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅ.16ರ ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪಾಲ್ಗೊಳ್ಳುವರು.
ಮಹಾಕುಂಭ ಮೇಳಕ್ಕೆ ಪೂರಕವಾಗಿ ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಯಿಂದ ಮೂರು ಜ್ಯೋತಿ ಯಾತ್ರೆ ಆರಂಭವಾಗಿದ್ದು, ಈಗಾಗಲೇ ಏಳು ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ಕಾರ ಎರಡು ಕೋಟಿ ರೂ ನೀಡಲಿದ್ದು, ಉಳಿದ ವೆಚ್ಚ ದಾನಿಗಳಿಂದ ಭರಿಸಲಾಗುವುದು ಎಂದು ತಿಳಿಸಿದರು.