ಈ ಬಾರಿಯೂ ಗಡಿ ಕಾಯುವ ಯೋಧರ ಜೊತೆ ದೀಪಾವಳಿ ಆಚರಿಸಲಿರುವ ಮೋದಿ

ನವದೆಹಲಿ : ದೀಪಾವಳಿ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಭಾರತದಲ್ಲಿ ಈಗಾಗಲೇ ತಯಾರಿಗಳು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೀಪಾವಳಿ ಹಬ್ಬ ಆಚರಿಸಲು ಸಜ್ಜಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮೋದಿ ದೀಪಾವಳಿ ಹಬ್ಬವನ್ನು ಗಡಿ ಕಾಯುವ ಸೈನಿಕರ ಜೊತೆ ಆಚರಿಸಲಿದ್ದಾರೆ.
ಕೇದಾರನಾಥದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದೆ. ಅಕ್ಟೋಬರ್ 21 ರಂದು ಪ್ರಧಾನಿ ನರೇಂದ್ರ ಮೋದಿ ಕೇದಾರನಾಥಕ್ಕೆ ತೆರಳಲಿದ್ದಾರೆ. ಕೇದಾರನಾಥ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ಮೋದಿ ಬಳಿಕ ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲಿದ್ದಾರೆ. ಬಳಿಕ ಅದೇ ದಿನ ಬದ್ರಿನಾಥಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಬದ್ರಿನಾಥದಲ್ಲಿ ಪೂಜೆ ಸಲ್ಲಿಸಿ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ಕೇದಾನಾಥ ಹಾಗೂ ಬದ್ರಿನಾಥ ಭೇಟಿ ಬಳಿಕ ಗಡಿ ಗ್ರಾಮವಾಗಿರುವ ಮನಾಗೆ ಭೇಟಿ ನೀಡುವ ಸಾಧ್ಯತೆ ಇದೆ.
ಅಕ್ಟೋಬರ್ 24ರ ದೀಪಾವಳಿ ಹಬ್ಬದ ದಿನ ಗಡಿ ಪ್ರದೇಶಕ್ಕೆ ತೆರಳಿ ಭಾರತೀಯ ಯೋಧರ ಜೊತೆ ದೀಪಾವಳಿ ಹಬ್ಬ ಆಚರಿಸಲಿದ್ದಾರೆ. 2014 ರಂದು ಮೋದಿ ಪ್ರಧಾನಿಯಾಗಿ ಅಧಿಕಾರವನ್ನು ಸ್ವೀಕರಿಸಿದ ನಂತರ ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 2020ರಲ್ಲಿ ಪ್ರಧಾನಿ ರಾಜಸ್ಥಾನದ ಜೈಸಲ್ಮೇರ್‌ನ ಲೊಂಜೆವಾಲಾ ಗಡಿಯಲ್ಲಿ ಯೋಧರೊಂದಿಗೆ ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸಿದ್ದರು. 2021ರಲ್ಲಿ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಮತ್ತು ರಾಜೌರಿ ಗಡಿಗಳಲ್ಲಿ ದೀಪಾವಳಿಯನ್ನು ಆಚರಿಸಿದ್ದರು.
2018ರಲ್ಲಿ ಪ್ರಧಾನಿ ಮೋದಿ ಅವರು ಸೈನಿಕರು ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರ ಜತೆ ಉತ್ತರಾಖಂಡದ ಭಾರತ-ಚೀನಾ ಗಡಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮಾಚರಣೆ ಮಾಡಿದ್ದರು. ಅಲ್ಲದೇ ಮೋದಿ ಪ್ರಧಾನಿಯಾದಾಗಿನಿಂದಲೂ ಗಡಿಯಲ್ಲಿಯೇ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. 2014 ರಲ್ಲಿ ಮೊದಲ ಬಾರಿಗೆ ಸಿಯಾಚಿನ್ ಪ್ರದೇಶದಲ್ಲಿ ಆಚರಿಸಿದರೆ, ಭಾರತ-ಪಾಕ್ ಯುದ್ಧದ 50 ನೇ ವರ್ಷಾಚರಣೆಯನ್ನು 2015ರಲ್ಲಿ ಪಂಜಾಬ್ ಗಡಿಯಲ್ಲಿ ಸೈನಿಕರ ಜತೆ ಕಳೆದಿದ್ದರು. ಮರುವರ್ಷ ಹಿಮಾಚಲಪ್ರದೇಶದಲ್ಲಿ ಮತ್ತು 2017 ರಲ್ಲಿ ಜಮ್ಮು-ಕಾಶ್ಮೀರದಲ್ಲಿ ದೀಪಾವಳಿ ಆಚರಿಸಿದ್ದರು.