ಶ್ರೀನಗರ ಶಾಲೆ ಮೇಲೆ ಉಗ್ರರ ದಾಳಿ: ಇಬ್ಬರು ಶಿಕ್ಷಕರ ಹತ್ಯೆ
ಶ್ರೀನಗರ, ಅಕ್ಟೋಬರ್ 07:ಶ್ರೀನಗರದ ಶಾಲೆಯೊಂದರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಶಿಕ್ಷಕರು ಮೃತಪಟ್ಟಿರುವ ಘಟನೆ ನಡೆದಿದೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ನಡೆದ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಹಂತಕರನ್ನು ಹಿಡಿಯಲು ಭಾರೀ ಶೋಧಕಾರ್ಯ ಆರಂಭಿಸಲಾಗಿದೆ. ಇಂದು ಬೆಳಗ್ಗೆ ಈ ಕೃತ್ಯ ನಡೆದಿದ್ದು, ಭಯೋತ್ಪಾದಕರು ನಗರದ ಈದ್ಗಾ ಪ್ರದೇಶದ ಸಂಗಮದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕರಾದ ಸತೀಂದರ್ ಕೌರ್ ಮತ್ತು ದೀಪಕ್ ಚಂದ್ ಮೇಲೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಉಗ್ರರ ನಾಗರಿಕರನ್ನು, ವಿಶೇಷವಾಗಿ ಕಾಶ್ಮೀರ ಕಣಿವೆಯ ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗುತ್ತಿದ್ದು, ಇದು ಭಯದ ವಾತಾವರಣ ಸೃಷ್ಟಿಸುವ ಮತ್ತು ಕೋಮು ಸೌಹಾರ್ದವನ್ನು ಹಾಳು ಮಾಡುವ ಗುರಿ ಹೊಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಹೇಳಿದ್ದಾರೆ.
"ಕೆಲವು ದಿನಗಳಿಂದ ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸುವ ಘಟನೆಗಳು ನಡೆಯುತ್ತಿವೆ. ಸಮಾಜಕ್ಕಾಗಿ ದುಡಿಯುತ್ತಿರುವ ಮತ್ತು ಯಾರೊಂದಿಗೂ ಸಂಬಂಧವಿಲ್ಲದ ಅಮಾಯಕರನ್ನು ಗುರಿಯಾಗಿಸಲಾಗುತ್ತಿದೆ. ಇದು ಭಯದ ವಾತಾವರಣವನ್ನು ಸೃಷ್ಟಿಸುವ ಮತ್ತು ಕಾಶ್ಮೀರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ನಾಲ್ಕನೇ ದಾಳಿ ಇದಾಗಿದೆ. ಅಕ್ಟೋಬರ್ 5 ರಂದು ಕಾಶ್ಮೀರಿ ಪಂಡಿತ ಎಂ ಎಲ್ ಬಿಂದ್ರೂ, ಕಾಶ್ಮೀರಿ ಮುಸ್ಲಿಂ ಮತ್ತು ಬಿಹಾರ ನಿವಾಸಿ ಶ್ರೀನಗರ ಹಾಗೂ ಬಂಡಿಪೋರಾದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತರಾಗಿದ್ದರು.
ಮೃತರನ್ನು ಸುಪಿಂದರ್ ಕೌರ್ ಮತ್ತು ದೀಪಕ್ ಚಂದ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ, ಕಾಶ್ಮೀರದಲ್ಲಿ 5 ನಾಗರಿಕರನ್ನು ಕೊಲ್ಲಲಾಗಿದೆ. ಬುಧವಾರ, ನಗರದಲ್ಲಿ ಪ್ರಸಿದ್ಧ ಕಾಶ್ಮೀರಿ ಪಂಡಿತ್ ಮೆಡಿಕಲ್ ಶಾಪ್ ಮಾಲೀಕರು ಸೇರಿದಂತೆ ಇಬ್ಬರು ನಾಗರಿಕರನ್ನು ಕೊಲ್ಲಲಾಯಿತು. ಇದಕ್ಕೂ ಮುನ್ನ ಮಂಗಳವಾರ ಮುಂಜಾನೆ, ಮೂವರನ್ನು ಕೊಲೆ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯದ ಪ್ರಮುಖ ಸಭೆ: ಇತ್ತೀಚಿಗೆ ಕಣಿವೆ ರಾಜ್ಯದಲ್ಲಿ ಜನಸಾಮಾನ್ಯರನ್ನು ಗುರಿಯಾಗಿಸುತ್ತಿರುವ ಭಯೋತ್ಪಾದಕರ ಕೃತ್ಯಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಗೃಹ ಸಚಿವಾಲಯವು ಪ್ರಮುಖ ಸಸ್ಭೆ ಕರೆದಿದೆ.
ಈ ಸಭೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಸಾರ್ವಜನಿಕರ ಭದ್ರತೆಯ ಹೊರತಾಗಿ, ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳನ್ನು ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ.
ಉಗ್ರರ ಕೃತ್ಯ ಖಂಡಿಸಿ ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಟ್ವೀಟ್ ಮಾಡಿದೆ. ಶ್ರೀನಗರಕ್ಕೆ ನುಗ್ಗಿ ಶಿಕ್ಷಕರನ್ನ ಕೊಂದಿರುವುದು ನಿಜಕ್ಕೂ ಭಯಾನಕವಾಗಿದೆ ಭಯ ಹುಟ್ಟಿಸಿದೆ.ಸಾವಿನ ಈ ನೃತ್ಯ ಯಾವಾಗ ಕೊನೆಗೊಳ್ಳುತ್ತದೆ.
ಶಿಕ್ಷಕರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದೆ.ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ ಕೂಡ ಟ್ವಿಟರ್‌ನಲ್ಲಿ ಈ ದಾಳಿಯನ್ನು ಖಂಡಿಸಿದ್ದಾರೆ.
ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದು ಬೇಡ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಹಲವರು ಘಟನೆಯನ್ನು ಖಂಡಿಸಿ ಕೂಡಲೇ ಉಗ್ರರನ್ನ ಬಂಧಿಸುವಂತೆ ಆಕ್ರೋಶ ಹೊರಹಾಕಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ 5ರಿಂದ 6 ಶಿಕ್ಷಕರು ಮೀಟಿಂಗ್ ಮಾಡುತ್ತಿದ್ದರು. ಪ್ರಿನ್ಸಿಪಲ್ ಕಚೇರಿಯಲ್ಲಿ ಶಾಲೆ ಬಗ್ಗೆ ಚರ್ಚೆಯಾಗುತ್ತಿತ್ತು. ಏಕಾಏಕಿ ಶಾಲೆಗೆ ಎಂಟ್ರಿಯಾದ ಇಬ್ಬರು ಉಗ್ರರು , ಪ್ರಿನ್ಸಿಪಾಲ್ ಕಚೇರಿ ಒಳಗೆ ನುಗ್ಗಿದ್ದಾರೆ.
ಅಲ್ಲಿದ್ದ ಮುಸ್ಲಿಮ್ ಶಿಕ್ಷಕರನ್ನು ಬೇರೆ ಮಾಡಿದ್ದಾರೆ. ಬಳಿಕ ಆ ಮುಸ್ಲಿಮ್ ಶಿಕ್ಷಕರನ್ನು ಹೊರಹೋಗುವಂತೆ ತಿಳಿಸಿ, ಇಬ್ಬರು ಹಿಂದೂ ಶಿಕ್ಷಕರನ್ನು ತಮ್ಮ ವಶಪಡಿಸಿಕೊಂಡಿದ್ದಾರೆ.
ಬಳಿಕ ಅವರನ್ನ ಕಚೇರಿಯಿಂದ ಹೊರ ಕರೆದುಕೊಂಡು ಬಂದು, ಶಾಲೆಯ ಕಾಂಪೌಂಡ್ ಒಳಗೆ ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ. ಮುಖ್ಯೋಪಾಧ್ಯಾಯ ಸತಿಂದರ್ ಕೌರ್ ಮತ್ತು ಶಿಕ್ಷಕ ದೀಪಕ್ ಸ್ಥಳದಲ್ಲೇ ಅಸುನೀಗಿದ್ದಾರೆ.
ಇನ್ನೂ ಘಟನೆ ನಡೆದ ಸ್ಥಳಕ್ಕೆ ಡಿಜಿಪಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು. "ಭಯೋತ್ಪಾದಕರು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ.
ಈ ದಾಳಿ ಹಿಂದೆ ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಹೀಗೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕಾಶ್ಮೀರಿ ಮುಸ್ಲಿಮರ ಮಾನಹಾನಿ ಮಾಡುವ ಪಿತೂರಿಯಾಗಿದೆ. ಕೋಮುಗಲಭೆ ಸೃಷ್ಟಿಸಲು ಈ ರೀತಿಯ ಕೃತ್ಯಗಳನ್ನು ಉಗ್ರರು ಮಾಡುತ್ತಿದ್ದಾರೆ. ಪಾಕಿಸ್ತಾನದ ಏಜೆನ್ಸಿಗಳ ಸೂಚನೆ ಮೇರೆಗೆ ಉಗ್ರರು ಈ ದಾಳಿ ನಡೆಸಿದ್ದಾರೆ" ಎಂದು ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.