ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಲು ಹೋದ ಮೂವರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವು

ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಲು ಹೋದ ಮೂವರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವು

ಮುದ್ದೇಬಿಹಾಳ : ನದಿಯಲ್ಲಿ ಮುಳುಗಿದ್ದ ವೃದ್ಧನ ಶವ ತರಲು ಬೋಟ್‌ ನಲ್ಲಿ ಹೋಗಿದ್ದ ವೇಳೆ ನದಿಯಲ್ಲಿ ಹಾಯ್ದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬೋಟ್‌ಚಾಲಕನೂ ಸೇರಿ ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಗಡಿ ಧನ್ನೂರ ಹತ್ತಿರ ಗುರುವಾರ ನಡೆದಿದೆ.

ಘಟನೆ ವಿವರ : ತಾಳಿಕೋಟೆ ತಾಲೂಕಿನ ಹರನಾಳ ಗ್ರಾಮದ ಶಿವಪ್ಪ ಸಿದ್ದಪ್ಪ ಅಂಬಳನೂರ(75) ಮಂಗಳವಾರದಂದು ಮನೆ ಬಿಟ್ಟು ಹೋಗಿದ್ದಾರೆ. ಅವರನ್ನು ಅಲ್ಲಿ ಇಲ್ಲಿ ಹುಡುಕಾಡುತ್ತಿರುವ ಸಂದರ್ಭದಲ್ಲಿ ತಂಗಡಗಿ ಹತ್ತಿರದ ಸೇತುವೆ ಮೇಲೆ ಬಟ್ಟೆ , ಚಪ್ಪಲಿ ಹಾಗೂ ಡೈರಿಯೊಂದು ಪತ್ತೆಯಾಗಿದೆ ಎನ್ನಲಾಗಿದೆ.

ನದಿಯಲ್ಲಿಯೇ ವೃದ್ಧ ಬಿದ್ದಿರುವುದನ್ನು ಖಚಿತಪಡಿಸಿಕೊಂಡ ವೃದ್ಧನ ಸಂಬಂಧಿಕರಾದ ಶರಣಗೌಡ ಭೀಮನಗೌಡ ಪಾಟೀಲ(30) ಹಾಗೂ ಯಮನಪ್ಪ ಸಾಯಬಣ್ಣ ಅಂಬಳನೂರ(40) ಕೂಡಲಸಂಗಮದಿಂದ ಖಾಸಗಿಯಾಗಿ ಬೋಟ್‌ ತೆಗೆದುಕೊಂಡು ಬಂದಿದ್ದಾರೆ. ಇವರ ಜೊತೆಗೆ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯವರಿಗೂ ಮಾಹಿತಿ ನೀಡಿದ್ದು ಅವರು ಇವರ ಜೊತೆಗೂಡಿ ವೃದ್ಧನ ಶವದ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಈ ವೇಳೆ ಧನ್ನೂರ ಗ್ರಾಮಕ್ಕೆ ಸಂಪರ್ಕ ಕೊಡುವ ಜಾಕವೆಲ್ ಬಳಿ ಇದ್ದ ವಿದ್ಯುತ್ ತಂತಿಗಳು ನದಿಯಲ್ಲಿ ಕೆಳಮಟ್ಟದಲ್ಲಿ ಹಾಯ್ದು ಹೋಗಿದ್ದು ಅದರ ಸಮೀಪಕ್ಕೆ ಬೋಟ್ ಹೋಗಿದೆ.

ಅಷ್ಟರಲ್ಲಾಗಲೇ ವಿದ್ಯುತ್ ತಂತಿ ತಪ್ಪಿಸಬೇಕೆನ್ನುವಷ್ಟರಲ್ಲಿಯೇ ಬೋಟ್‌ಗೆ ವಿದ್ಯುತ್ ತಂತಿಗಳು ಸ್ಪರ್ಶಿಸಿವೆ. ಅದರಲ್ಲಿದ್ದ ಶರಣಗೌಡ ಪಾಟೀಲ ಹಾಗೂ ಯಮನಪ್ಪ ಅಂಬಳನೂರ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ನದಿಗೆ ಬಿದ್ದು ಮುಳುಗಿದ್ದಾರೆ.

ಸದ್ಯಕ್ಕೆ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಹುನಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಸಿಪಿಐ ಆನಂದ ವಾಘಮೋಡೆ, ಪಿಎಸೈ ರೇಣುಕಾ ಜಕನೂರ, ತಂಗಡಗಿ ಗ್ರಾಪಂ ಪಿಡಿಓ ಉಮೇಶ ರಾಠೋಡ ಭೇಟಿ ನೀಡಿದ್ದಾರೆ.