ಸಿಂಬು ನಟನೆಯ ಮಾನಾಡು ಚಿತ್ರ ಬ್ಯಾನ್​ ಮಾಡುವಂತೆ ಬಿಜೆಪಿ ಆಗ್ರಹ: ಈ ಸಿನಿಮಾದಲ್ಲಿ ಅಂಥದ್ದೇನಿದೆ?

ಸಿಂಬು ನಟನೆಯ ಮಾನಾಡು ಚಿತ್ರ ಬ್ಯಾನ್​ ಮಾಡುವಂತೆ ಬಿಜೆಪಿ ಆಗ್ರಹ: ಈ ಸಿನಿಮಾದಲ್ಲಿ ಅಂಥದ್ದೇನಿದೆ?

ಚೆನ್ನೈ: ಸೌತ್​ ಸೂಪರ್​ ಸ್ಟಾರ್​ ಸಿಂಬು ಅಭಿನಯದ ಟೈಮ್​ ಲೂಪ್​ ಥ್ರಿಲ್ಲರ್​ 'ಮಾನಾಡು' ಚಿತ್ರ ಕಾಲಿವುಡ್​ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಇದೊಂದು ರಾಜಕೀಯ ಸೈನ್ಸ್​ಫಿಕ್ಸನ್ ಸಿನಿಮಾ ಆಗಿದ್ದು, ಬಿಡುಗಡೆ ದಿನವೇ ಕೋಟಿ ಕೋಟಿ ಹಣ ಬಾಚಿಕೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಆದರೆ, ಈಗ ಮಾನಾಡು ಚಿತ್ರ ವಿವಾದಕ್ಕೆ ಗುರಿಯಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಚಿತ್ರವನ್ನು ಬ್ಯಾನ್​ ಮಾಡಿ ಎಂದು ಬಿಜೆಪಿ ನಾಯಕರೊಬ್ಬರು ಆಗ್ರಹಿಸಿದ್ದಾರೆ.

ಮಾನಾಡು ಚಿತ್ರವು ಮುಸ್ಲಿಂ ಯುವಕನೊಬ್ಬನ ಸುತ್ತ ಸುತ್ತುತ್ತದೆ, ಮುಖ್ಯಮಂತ್ರಿಯ ಹತ್ಯೆಗೆ ಮುಸ್ಲಿಂ ವ್ಯಕ್ತಿಯನ್ನು ಸಿಕ್ಕಿಹಾಕಿಸುವ ಸಂಚನ್ನು ಸಹಾಯಕ ಕಮಿಷನರ್ ತಡೆಯಲು ಪ್ರಯತ್ನಿಸುವುದೇ ಈ ಚಿತ್ರದ ಕಥಾಹಂದರ. ಇದೀಗ ಈ ಚಿತ್ರದ ವಿರುದ್ಧ ಬಿಜೆಪಿ ಅಲ್ಪಸಂಖ್ಯಾತರ ತಂಡದ ರಾಷ್ಟ್ರೀಯ ಕಾರ್ಯದರ್ಶಿ ವೆಲ್ಲೋರ್​ ಇಬ್ರಾಹಿಂದ ಮಾತನಾಡಿದ್ದು, ಚಿತ್ರವನ್ನು ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದಾರೆ.

ಚಿತ್ರದಲ್ಲಿ ಪೊಲೀಸರನ್ನು ಉಗ್ರರು ಎಂದು ಬಿಂಬಿಸಲಾಗಿದೆ. ಕೊಯಮತ್ತೂರು ಬಾಂಬ್​ ಸ್ಫೋಟದ ಬಗ್ಗೆ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಅಲ್ಲದೆ, ಹಿಂದು-ಮುಸ್ಲಿಂ ಒಗ್ಗಟ್ಟಿಗೆ ತೊಡಕಾಗಿದೆ. ಚಿತ್ರವನ್ನು ವೈಭವೀಕರಿಸಲು ಧಾರ್ಮಿಕ ಸಂಕೇತವನ್ನು ಬಳಸಿಕೊಳ್ಳಲಾಗಿದ್ದು, ಇದು ಹಿಂಸೆ ಪ್ರಚೋದಿಸುತ್ತದೆ. ಸಿಎಂ ಸ್ಟಾಲಿನ್​ ಅವರು ಮಧ್ಯಸ್ಥಿಕೆ ವಹಿಸಬೇಕು. ಮಾನಾಡು ಚಿತ್ರದ ವಿವಾದಾತ್ಮಕ ದೃಶ್ಯವನ್ನು ತೆಗೆಸಬೇಕೆಂದು ಕೋರಿದ್ದಾರೆ.

ಸರ್ಕಾರ ಮಾನಾಡು ಚಿತ್ರವನ್ನು ಬ್ಯಾನ್​ ಮಾಡಬೇಕು. ಬ್ಯಾನ್​ ಮಾಡದಿದ್ದರೆ ಚಿತ್ರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ. ನಿರ್ದೇಶಕರ ಮನೆಯ ಮುಂದೆ ಆದಷ್ಟು ಬೇಗ ಪ್ರತಿಭಟನೆ ನಡೆಸಲಾಗುವುದು. ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟದಾಗಿದೆ. ಬಿಜೆಪಿ ದೂರಿನ ಮೇಲೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಇಬ್ರಾಹಿಂ ಆರೋಪ ಮಾಡಿದ್ದಾರೆ.