ತಮಿಳುನಾಡು ಲಾಕ್‌ಡೌನ್: ನಾಳೆಯಿಂದ 27 ಜಿಲ್ಲೆಗಳಲ್ಲಿ ಭಾಗಶಃ ವಿನಾಯಿತಿ

ಚೆನ್ನೈ: ತಮಿಳುನಾಡಿನ 27 ಜಿಲ್ಲೆಗಳಲ್ಲಿ ಜೂನ್ 14ರಿಂದ ಜಾರಿಗೆ ಬರುವಂತೆ ಲಾಕ್‌ಡೌಡ್ ಭಾಗಶಃ ಸಡಿಲಿಸಲಾಗಿದೆ. ಟೀ ಶಾಪ್ ತೆರೆಯಲು ಅನುಮತಿ ಸೇರಿದಂತೆ ಹಲವು ವಿನಾಯಿತಿಯನ್ನು ನೀಡಲಾಗಿದೆ. ಆದರೆ ಇತರ 11 ಜಿಲ್ಲೆಗಳಲ್ಲಿ ಕಠಿಣ ಲಾಕ್‌ಡೌನ್ ಮುಂದುವರಿಯಲಿದೆ.
ಚೆನ್ನೈ ನಗರವೂ ಒಳಗೊಂಡಂತೆ ಈ 27 ಜಿಲ್ಲೆಗಳಲ್ಲಿ ಟೀ ಶಾಪ್‌ಗಳನ್ನು ಬೆಳಿಗ್ಗೆ 6 ರಿಂದ ಸಂಜೆ 5ರವರೆಗೂ ತೆರೆಯಬಹುದು. ಪಾರ್ಸಲ್‌ಗೆ ಅವಕಾಶವಿದೆ. ಬಿಸಿ ಪಾನೀಯ ಒಯ್ಯಲು ಪಾತ್ರೆ ಬಳಸಬೇಕು. ಆದಷ್ಟು ಪ್ಲಾಸ್ಟಿಕ್ ಬ್ಯಾಗ್ ಬಳಕೆ ತಪ್ಪಿಸಬೇಕು ಎಂದು ಕೋರಲಾಗಿದೆ.
ಸಿಹಿ ಮತ್ತು ಖಾರದ ತಿನಿಸು ಮಾರುವ ಅಂಗಡಿಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ತೆರೆಯಲು ಅನುಮತಿ ಇದೆ. ಕೇವಲ ಪಾರ್ಸಲ್ ಒಯ್ಯಬಹುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಟೀ ಶಾಪ್‌ಗಳು ಅಧಿಕ ಸಂಖ್ಯೆಯಲ್ಲಿದ್ದು, ಲಾಕ್‌ಡೌನ್ ಕಾರಣ ಮೇ 10ರಿಂದ ಬಂದ್ ಆಗಿವೆ. ಉಳಿದಂತೆ, ರೆಸ್ಟೋರಂಟ್‌ಗಳು ಮತ್ತು ಬೇಕರಿಗಳು ಈಗಾಗಲೇ ವಹಿವಾಟು ನಡೆಸುತ್ತಿವೆ.
ಸರ್ಕಾರಿ ಸೇವೆ ನಿರೀಕ್ಷಿಸುತ್ತಿರುವ ಜನರಿಗೆ ನೆರವಾಗಲು, ಇ-ಸರ್ವೀಸ್ ಸೆಂಟರ್ ತೆರೆಯಲು ಅವಕಾಶ ನೀಡಲಾಗಿದೆ. 35 ದಿನಗಳ ಬಳಿಕ ಸಲೂನ್, ಪಾರ್ಕ್, ಮದ್ಯ ಮಾರಾಟ ಮಳಿಗೆಗಳು 14ರಿಂದ ಕಾರ್ಯನಿರ್ವಹಿಸಲಿವೆ.