ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆದ ಸನ್ರೈಸರ್ಸ್ ಈಸ್ಟರ್ನ್ ಕೇಪ್
ದಕ್ಷಿಣ ಆಫ್ರಿಕಾದಲ್ಲಿ ನಡೆದ ಎಸ್ಎ 20 ಲೀಗ್ನ ಚೊಚ್ಚಲ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಒಡೆತನದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ಚೊಚ್ಚಲ ಆವೃತ್ತಿಯಲ್ಲಿ ಕಪ್ ಗೆದ್ದು ಸಂಭ್ರಮಿಸಿದೆ.
ಜೋಹಾನ್ಸ್ಬರ್ಗ್ನ ದ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ಉತ್ತಮ ಮೊತ್ತ ಕಲೆಹಾಕುವಲ್ಲಿ ಎಡವಿತು.
ಫಿಲ್ ಸಾಲ್ಟ್ 8 ರನ್ ಗಳಿಸಿ ಔಟಾಗುವ ಮೂಲಕ ಆರಂಭದಲ್ಲೇ ಆಘಾತ ಅನುಭವಿಸಿತು. ಕುಶಾಲ್ ಮೆಂಡಿಸ್ 19 ಎಸೆತಗಳಲ್ಲಿ 21 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಕುಶಾಲ್ ಮೆಂಡಿಸ್ ಗಳಿಸಿದ 21 ರನ್ ಪ್ರಿಟೋರಿಯಾ ಕ್ಯಾಪಿಟಲ್ಸ್ ಪರವಾಗಿ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ಡಿ ಬ್ರುಯ್ನ್ 11 ರನ್, ರಿಲೀ ರೊಸೋವ್ 19 ರನ್, ಕಾಲಿನ್ ಇಂಗ್ರಾಮ್ 17 ರನ್, ಜಿಮ್ಮಿ ನೀಶಮ್ 19 ರನ್, ಎಥಾನ್ ಬೋಷ್ 15, ವೇಯ್ನ್ ಪ್ಯಾರ್ನೆಲ್ 8, ಆದಿಲ್ ರಶೀದ್ 3 ರನ್ ಗಳಿಸಿ ಔಟಾದರು. ಪ್ರಿಟೋರಿಯಾ ಕ್ಯಾಪಿಟಲ್ಸ್ ಅಂತಿಮವಾಗಿ 19.3 ಓವರ್ ಗಳಲ್ಲಿ 135 ರನ್ಗಳಿಗೆ ಆಲೌಟ್ ಆಯಿತು.
ವ್ಯಾನ್ ಡೆರ್ ಮೆರ್ವೆ ಮಾರಕ ಬೌಲಿಂಗ್
ಸನ್ರೈಸರ್ಸ್ ಈಸ್ಟರ್ನ್ ಕೇಪ್ ಪರವಾಗಿ ವ್ಯಾನ್ ಡೆರ್ ಮೆರ್ವೆ ಮಾರಕ ಬೌಲಿಂಗ್ ಮಾಡಿದರು. 4 ಓವರ್ ಗಳಲ್ಲಿ 31 ರನ್ ನೀಡಿದ ಅವರು 4 ವಿಕೆಟ್ ಪಡೆದು ಮಿಂಚಿದರು. ಸಿಸಿಂಡಾ ಮಗಲ ಮತ್ತು ಒಟ್ನಿಯಲ್ ಬಾರ್ಟ್ಮನ್ ತಲಾ 2 ವಿಕೆಟ್ ಪಡೆದುಕೊಂಡರು. ಮಾರ್ಕೊ ಜಾನ್ಸನ್ ಮತ್ತು ಏಡೆನ್ ಮಾರ್ಕ್ರಾಮ್ ತಲಾ 1 ವಿಕೆಟ್ ಪಡೆದರು.
ಅತ್ಯಂತ ಶಿಸ್ತಿನ ಬೌಲಿಂಗ್ ಮಾಡಿದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ಕಡಿಮೆ ಮೊತ್ತಕ್ಕೆ ಪ್ರಿಟೋರಿಯಾ ಕ್ಯಾಪಿಟಲ್ಸ್ ಅನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ಸುಲಭವಾಗಿ ಚೇಸ್ ಮಾಡಿದ ಸನ್ರೈಸರ್ಸ್
136 ರನ್ಗಳ ಗುರಿಯನ್ನು ಬೆನ್ನಟ್ಟಿದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ಯಾವುದೇ ತಪ್ಪು ಮಾಡಲಿಲ್ಲ. ಆರಂಭಿಕ ಆಟಗಾರ ಆಡಮ್ ರೋಸಿಂಗ್ಟನ್ 30 ಎಸೆತಗಳಲ್ಲಿ 4 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ 57 ರನ್ ಸಿಡಿಸಿ ತಂಡದ ಗೆಲುವನ್ನು ಸುಲಭವಾಗಿಸಿದರು.
ಜೋರ್ಡನ್ ಹೆರ್ಮನ್ 22 ರನ್, ನಾಯಕ ಏಡೆನ್ ಮಾರ್ಕ್ರಾಮ್ 26 ರನ್ ಗಳಿಸಿದರು. ಮಾರ್ಕೊ ಜಾನ್ಸನ್ ಅಜೇಯ 13 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 16.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿಯನ್ನು ಬೆನ್ನಟ್ಟಿದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ಚೊಚ್ಚಲ ಆವೃತ್ತಿಯ ಚಾಂಪಿಯನ್ಗಳಾದರು.