ಏಕದಿನ ಪಂದ್ಯ : ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ ಸೋಲು

ಏಕದಿನ ಪಂದ್ಯ : ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ ಸೋಲು

ಬ್ರಿಸ್ಟಲ್‌ : ನಿಧಾನ ಗತಿಯ ಬ್ಯಾಟಿಂಗ್‌ ಹಾಗೂ ಕಳಪೆ ಬೌಲಿಂಗಿಗೆ ಬೆಲೆ ತೆತ್ತ ಭಾರತದ ವನಿತಾ ತಂಡ ಇಂಗ್ಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ.

ನಾಯಕಿ ಮಿಥಾಲಿ ರಾಜ್‌ ಅವರ ಬ್ಯಾಟಿಂಗ್‌ ಹೋರಾಟದ ಫ‌ಲವಾಗಿ ಭಾರತ 8 ವಿಕೆಟಿಗೆ 201 ರನ್ನುಗಳ ಸಾಮಾನ್ಯ ಸ್ಕೋರ್‌ ದಾಖಲಿಸಿದರೆ, ಇಂಗ್ಲೆಂಡ್‌ 34.5 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 202 ರನ್‌ ಬಾರಿಸಿತು. ಓಪನರ್‌ ಟಾಮಿ ಬ್ಯೂಮಂಟ್‌ (ಅಜೇಯ 87) ಮತ್ತು ನಥಾಲಿ ಶಿವರ್‌ (ಅಜೇಯ 74) ಮುರಿಯದ 3ನೇ ವಿಕೆಟಿಗೆ 119 ರನ್‌ ಪೇರಿಸಿ ಗೆಲುವು ಸಾರಿದರು. ಬ್ಯಾಟಿಂಗಿನಂತೆ ಭಾರತದ ಬೌಲಿಂಗ್‌ ಕೂಡ ವಿಫಲಗೊಂಡಿತು.

ಈ ಪಂದ್ಯದ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡಿದ ಕಿರಿಯ ಆಟಗಾರ್ತಿ ಎಂಬ ದಾಖಲೆ ಬರೆದ ಶಫಾಲಿ ವರ್ಮ (15) ಮತ್ತು ಅನುಭವಿ ಸ್ಮತಿ ಮಂಧನಾ (10) 27 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡ ಪರಿಣಾಮ ಭಾರತದ ಮೇಲೆ ಒತ್ತಡ ಬಿತ್ತು. ನಾಯಕಿಯ ಆಟವಾಡಿದ ಮಿಥಾಲಿ ಎರಡು ಉಪಯುಕ್ತ ಜತೆಯಾಟಗಳಲ್ಲಿ ಪಾಲ್ಗೊಂಡರು.

ಪೂನಂ ರಾವುತ್‌ (32) ಜತೆ 3ನೇ ವಿಕೆಟಿಗೆ 56 ರನ್‌, ದೀಪ್ತಿ ಶರ್ಮ (30) ಜತೆ 4ನೇ ವಿಕೆಟಿಗೆ 65 ರನ್‌ ಪೇರಿಸಿದರು. 46ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ನಿಂತ ಮಿಥಾಲಿ ಗಳಿಕೆ 108 ಎಸೆತಗಳಿಂದ 72 ರನ್‌. ಇದು ಅವರ 56ನೇ ಅರ್ಧ ಶತಕ. ಅಂತಿಮವಾಗಿ ಸ್ಪಿನ್ನರ್‌ ಎಕ್‌ ಸ್ಟೋನ್‌ ಎಸೆತದಲ್ಲಿ ಬೌಲ್ಡ್‌ ಆಗಿ ವಾಪಸಾದರು. 40ಕ್ಕೆ 3 ವಿಕೆಟ್‌ ಕಿತ್ತ ಎಕ್‌ಸ್ಟೋನ್‌ ಇಂಗ್ಲೆಂಡಿನ ಯಶಸ್ವಿ ಬೌಲರ್‌.