ಮೇಕೆದಾಟು ಪಾದಯಾತ್ರೆ ಸ್ಥಗಿತಕ್ಕೆ ಆ ಒಂದು ದೂರವಾಣಿ ಕರೆಯೇ ಕಾರಣ?

ಮೇಕೆದಾಟು ಪಾದಯಾತ್ರೆ ಸ್ಥಗಿತಕ್ಕೆ ಆ ಒಂದು ದೂರವಾಣಿ ಕರೆಯೇ ಕಾರಣ?

ಬಹು ಚರ್ಚಿತ ಕೆಪಿಸಿಸಿ ಪ್ರಾಯೋಜಿತ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ತಾತ್ಕಾಲೀಕ ಬ್ರೇಕ್ ನೀಡಿದೆ. ಯಾವ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಇಂದು (ಜ 13) ಕೂಡಾ ಅಬ್ಬರಿಸಿದ್ದ ಕಾಂಗ್ರೆಸ್ ಮುಖಂಡರು ಮನಸ್ಸು ಬದಲಿಸಿ ಯಾತ್ರೆಯನ್ನು ಅರ್ಧದಲ್ಲೇ ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಕೋವಿಡ್ ನಿಯಮವನ್ನು ಪಾಲಿಸಲಾಗುವುದು ಎಂದು ಹೇಳಿಕೊಂಡು ಬಂದಿದ್ದ ಕಾಂಗ್ರೆಸ್ ನಾಯಕರು ನಯಾಪೈಸೆ ಕೊರೊನಾ ಮಾರ್ಗಸೂಚಿಗೆ ಬೆಲೆಯನ್ನು ಕೊಡಲಿಲ್ಲ ಎನ್ನುವುದಕ್ಕೆ ನಾಲು ದಿನಗಳ ಪಾದಯಾತ್ರೆ ಸಾಕ್ಷಿಯಾಯಿತು. ಕಾಂಗ್ರೆಸ್ ಪಾದಯಾತ್ರೆಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದ್ದರೂ, ರಾಜ್ಯದಲ್ಲಿ ಕೋವಿಡ್ ಹರಡುವ ವಿಚಾರದಲ್ಲಿ ಅದು ಆರೋಗ್ಯಕರ ಬೆಳವಣಿಗೆ ಆಗಿರಲಿಲ್ಲ. ಆ ಕಾರಣಕ್ಕಾಗಿ, ಸಾರ್ವಜನಿಕ ವಲಯದಲ್ಲೂ ಪಾದಯಾತ್ರೆಗೆ ವಿರೋಧ ವ್ಯಕ್ತವಾಗುತ್ತಾ ಬರುತ್ತಿತ್ತು.

ರಾಮನಗರ ಜಿಲ್ಲಾಡಳಿತದ ಮನವಿ, ಸರಕಾರ ಯಾತ್ರೆಗೆ ನಿಷೇಧ ಹೇರಿಕೆ, ಹೈಕೋರ್ಟ್ ಎಚ್ಚರಿಕೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮನವಿ ಮಾಡಿದ್ದರೂ ಕಾಂಗ್ರೆಸ್ ನಾಯಕರು ಪಾದಯಾತ್ರೆ ಸ್ಥಗಿತಗೊಳಿಸಲು ತಯಾರಿರಲಿಲ್ಲ. ಆದರೆ.. ರಾಮನಗರ ಕಾಂಗ್ರೆಸ್ ಕಚೇರಿಯಿಂದ ಪಾದಯಾತ್ರೆ

ರಾಮನಗರ ಕಾಂಗ್ರೆಸ್ ಕಚೇರಿಯಿಂದ ಪಾದಯಾತ್ರೆ ಮುಂದುವರಿಸಲು ಎಲ್ಲಾ ಸಿದ್ದತೆಗಳನ್ನು ಸಂಸದ ಡಿ.ಕೆ.ಸುರೇಶ್ ಮತ್ತವರ ತಂಡ ಮಾಡಿಕೊಂಡಿತ್ತು. ಒಂದು ದಿನದ ಹಿಂದೆ ಯಾತ್ರೆಗೆ ಸರಕಾರ ನಿಷೇಧ ಹೇರಿದ್ದರಿಂದ, ಯಾತ್ರೆ ಮುಂದುವರಿಸದಂತೆ ಮನವಿ ಮಾಡಲು ಜಿಲ್ಲಾ ಪೊಲೀಸ್ ಆಯುಕ್ತ ಗಿರೀಶ್ ಅವರು ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ದೂರವಾಣಿಯಲ್ಲೂ ಮಾತನಾಡಿದ್ದರು. ಆದರೆ, ಇದಕ್ಕೆ ಡಿಕೆಶಿ ಕನ್ವಿನ್ಸ್ ಆಗಿರಲಿಲ್ಲ.

ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ವಿಚಾರ

ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ವಿಚಾರವನ್ನು ಮುಂದಿಟ್ಟುಕೊಂಡು ಯು.ಟಿ.ಖಾದರ್ ಸೇರಿದಂತೆ ಕಾಂಗ್ರೆಸ್ಸಿನ ಪ್ರಮುಖ ನಾಯಕರೇ ಪಾದಯಾತ್ರೆ ಸ್ಥಗಿತಗೊಳಿಸಲು ಒತ್ತಾಯಿಸಲು ಆರಂಭಿಸಿದ್ದರು. ಪಾದಯಾತ್ರೆ ಮುಂದುವರಿಸುವ ವಿಚಾರದಲ್ಲಿ ಪರವಿರೋಧ ಮಾತುಗಳು ವ್ಯಕ್ತವಾಗುತ್ತಿತ್ತು. ಶುಕ್ರವಾರ (ಜ 14) ಸಾರ್ವಜನಿಕ ಹಿತಾಶಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುವುದಿತ್ತು. ಹೈಕೋರ್ಟ್ ತೀರ್ಪು ಬರುವವರೆಗಾದರೂ ಪಾದಯಾತ್ರೆ ಮುಂದುವರಿಸಿಕೊಂಡು ಹೋಗೋಣ ಎನ್ನುವ ತೀರ್ಮಾನಕ್ಕೆ ಬಹುತೇಕ ಬರಲಾಗಿತ್ತು.

ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ರಾಹುಲ್ ಗಾಂಧಿಯವರ ಬಳಿ ಚರ್ಚೆ

ಆದರೆ, ಪಾದಯಾತ್ರೆಯ ಅಪ್ಡೇಟ್ಸ್ ಮತ್ತು ಕೋರ್ಟ್ ನಿನ್ನೆ ಕಿಡಿಕಾರಿರುವ ವಿಚಾರವನ್ನು ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ರಾಹುಲ್ ಗಾಂಧಿಯವರ ಬಳಿ ಚರ್ಚಿಸಿದ್ದಾರೆ. ಕೋರ್ಟ್ ವಿರುದ್ದ ನಡೆದುಕೊಳ್ಳುವುದು ಮತ್ತು ಕೊರೊನಾ ನಾಗಾಲೋಟದಲ್ಲಿ ಏರಿಕೆಯಾಗುತ್ತಿರುವ ಸಮಯದಲ್ಲಿ ಪಾದಯಾತ್ರೆ ಮುಂದುವರಿಸಿದರೆ, ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಾಗಿ, ಪಾದಯಾತ್ರೆಯನ್ನು ಸ್ಥಗಿತಗೊಳಿಸುವುದು ಸೂಕ್ತ ಎನ್ನುವ ಸಲಹೆಯನ್ನು ರಾಹುಲ್ ಗಾಂಧಿಯವರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪಕ್ಷದ ಬದ್ದತೆ, ನಮ್ಮದು ಜನಪರ ಪಕ್ಷ - ಡಿ.ಕೆ.ಶಿವಕುಮಾರ್ ಹೈಕಮಾಂಡಿನ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡ ಕಾಂಗ್ರೆಸ್ ಮುಖಂಡರು, ಪಾದಯಾತ್ರೆ ಮುಂದೂಡುವ ಅಂತಿಮ ನಿರ್ಧಾರಕ್ಕೆ ಬಂದರು ಎನ್ನುವ ಸುದ್ದಿ ಹರಿದಾಡುತ್ತಿದೆ. "ನಾನು ಮತ್ತು ಸಿದ್ದರಾಮಯ್ಯ ಇಬ್ಬರು ಮಾತ್ರ ಪಾದಯಾತ್ರೆ ಮಾಡುವ ನಿರ್ಧಾರವನ್ನು ಮಾಡಿದ್ದೆವು. ಆದರೆ, ಕಾರ್ಯಕರ್ತರು ಮತ್ತೆ ನಮ್ಮ ಜೊತೆ ಬರುವ ಸಾಧ್ಯತೆ ಇರುವುದರಿಂದ ಸ್ಥಗಿತಗೊಳಿಸುವ ತ್ಯಾಗವನ್ನು ಮಾಡಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಬದ್ದತೆ, ನಮ್ಮದು ಜನಪರ ಪಕ್ಷ"ಎಂದು ಡಿ.ಕೆ.ಶಿವಕುಮಾರ್ ಹೇಳಿದರು.