ಸುದೀಪ್, ರವಿಚಂದ್ರನ್ ಸೇರಿದಂತೆ ಹಲವು ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ 'ಸಿಂಹಪ್ರಿಯ'

ಸುದೀಪ್, ರವಿಚಂದ್ರನ್ ಸೇರಿದಂತೆ ಹಲವು ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ 'ಸಿಂಹಪ್ರಿಯ'

ಪ್ರೀತಿ ವಿಚಾರವಾಗಿ ಕಳೆದ ವರ್ಷ ಅತಿಹೆಚ್ಚು ಸುದ್ದಿಗೀಡಾಗಿದ್ದ ಸೆಲೆಬ್ರಿಟಿ ಜೋಡಿ ಎಂದರೆ ಅದು ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ. ಮೊದಲಿಗೆ ಇಬ್ಬರ ನಡುವೆ ಪ್ರೀತಿ ಇದೆ ಎಂಬ ಗುಸುಗುಸು ಮೂಲಕ ಆರಂಭವಾದ ಈ ಸುದ್ದಿ ನಂತರ ಅಧಿಕೃತವೂ ಆಯಿತು.

ಸಾಮಾಜಿಕ ‌ಜಾಲತಾಣದಲ್ಲಿ ಇಬ್ಬರೂ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ತಮ್ಮಿಬ್ಬರ ನಡುವಿನ ಪ್ರೀತಿ ವಿಷಯವನ್ನು ಬಹಿರಂಗಪಡಿಸಿದರು.

ಬಳಿಕ ಈ ಜೋಡಿ ಕೆಲ ದಿನಗಳಲ್ಲೇ ನಿಶ್ಚಿತಾರ್ಥವನ್ನೂ ಸಹ ಮಾಡಿಕೊಂಡಿತು. ಇನ್ನು ಇತ್ತೀಚಿಗಷ್ಟೇ ಮದುವೆ ದಿನಾಂಕವನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದ ಈ ಜೋಡಿ ಇದೀಗ ಚಂದನವನದ ತಾರೆಯರ ಮನೆ ಮನೆಗೆ ಭೇಟಿ ನೀಡಿ ಆಹ್ವಾನಿಸುತ್ತಿದೆ.

ಸದ್ಯ ನಟ ಕಿಚ್ಚ ಸುದೀಪ್, ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿ ಶೃತಿ, ಮಾಲಾಶ್ರೀ ಹಾಗೂ ಸಂಗೀತ ನಿರ್ದೇಶಕ ಗುರು ಕಿರಣ್ ಮನೆಗಳಿಗೆ ಭೇಟಿ ನೀಡಿರುವ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ವಿವಾಹ ಆಮಂತ್ರಣ ಪತ್ತಿಕೆ ನೀಡಿ ಕಲಾವಿದರನ್ನು ಆಹ್ವಾನಿಸುತ್ತಿರುವ ಫೋಟೊಗಳು ಸಾಮಾಜಿಕ‌ ಜಾಲತಾಣದಲ್ಲಿ ಹರಿದಾಡಿವೆ.

ಇನ್ನು ಜನವರಿ 26ರಂದು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಈ ಜೋಡಿ ಜನವರಿ 28ರಂದು ಬೆಂಗಳೂರಿನಲ್ಲಿ ರಿಸೆಪ್ಷನ್ ಮಾಡಿಕೊಳ್ಳಲಿದೆ. ಇನ್ನು ಮೊನ್ನೆಯಷ್ಟೇ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಡಾಲಿ ಧನಂಜಯ್ ಮನೆಗೆ ಭೇಟಿ ನೀಡಿ ವಿವಾಹ ಆಮಂತ್ರಣ ನೀಡಿತ್ತು. ಈ ವೇಳೆಯ ಫೋಟೊವನ್ನು ಹಂಚಿಕೊಂಡಿದ್ದ ಡಾಲಿ ಧನಂಜಯ್ ಇಷ್ಟು ದಿನಗಳು ಮನೆಗೆ ಒಬ್ಬನೇ ಬರ್ತಿದ್ದ, ಈಗ ಜೋಡಿಯಾಗಿ ಬಂದಿದ್ದಾನೆ, ಮುದ್ದಾದ ಜೋಡಿ ಎಂದು ಬರೆದುಕೊಂಡು ಇಬ್ಬರಿಗೂ ಶುಭಕೋರಿದ್ದರು.