ಪ್ರತಿ ಆರು ತಿಂಗಳಿಗೊಮ್ಮೆ ಶಿಕ್ಷಕರ ಅರ್ಹತಾ ಪರೀಕ್ಷೆ: ಸಚಿವ
ತುಮಕೂರು: ಆರು ತಿಂಗಳಿಗೆ ಒಮ್ಮೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭಾನುವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 'ಆರು ತಿಂಗಳಿಗೆ ಒಮ್ಮೆ ನಿಗದಿತ ದಿನಾಂಕದಂದು ಟಿಇಟಿ ನಡೆಸಿದರೆ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ' ಎಂದು ಸ್ಪಷ್ಟಪಡಿಸಿದರು.
ಶಿಕ್ಷಕರ ವರ್ಗಾವಣೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಸೆ. 5ರಿಂದ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಯಾವುದೇ ಗೊಂದಲಕ್ಕೆ ಅವಕಾಶಗಳು ಇಲ್ಲದಂತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ರಾಜ್ಯದಲ್ಲಿ ಸುಮಾರು 35 ಸಾವಿರದಿಂದ 40 ಸಾವಿರ ಶಿಕ್ಷಕರು ವರ್ಗಾವಣೆಯಾಗಲಿದ್ದು, ಶಿಕ್ಷಕರು ಬಯಸಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.